ಜೆಜೆಎಂ ಕಾಮಗಾರಿ ಕಳಪೆ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ
ಈ ಹಿಂದೆ ಸಚಿವನಾಗಿದ್ದಾಗ ಯಲಬುರ್ಗಾ-ಕುಷ್ಟಗಿ ತಾಲೂಕಿಗೆ ಆಲಮಟ್ಟಿಯಿಂದ ಶುದ್ಧ ಕುಡಿವ ನೀರಿಗಾಗಿ ೭೬೦ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದ್ದೆ. ಅದು ಮುಕ್ತಾಯಗೊಂಡು ಜನರಿಗೆ ನೀರು ದೊರೆಯುತ್ತಿರುವುದು ಖುಷಿಯ ವಿಚಾರ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಕಲ್ಲೂರ, ಸಂಗನಾಳ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂಥ ಬೃಹತ್ ಯೋಜನೆ ಮಂಜೂರು ಮಾಡಿಸಿ, ನೀರಿನ ಬವಣೆ ತಪ್ಪಿಸುವ ಕೆಲಸ ಮಾಡಿದ್ದೇನೆ. ಆದರೆ ಜೆಜೆಎಂ ಕಾಮಗಾರಿ ಕಳಪೆ ನಡೆಸಿ ಸಮರ್ಪಕ ನೀರು ಪೂರೈಕೆಯಾಗದೇ ನಿವಾಸಿಗಳು ತೊಂದರೆ ಪಡುವಂತಾಗಿದೆ ಎಂದರು.
ಜಿಲ್ಲಾದ್ಯಂತ ಜೆಜೆಎಂ ಕಾಮಗಾರಿ ತೀವ್ರ ಕಳಪೆ ಮಟ್ಟದಿಂದ ನಡೆದಿದ್ದು ಪೈಪ್‌ಲೈನ್ ಹೊಡೆದು ಹಾಳಾಗಿದ್ದು, ನೀರು ಕುಡಿದು ವಾಂತಿ ಭೇದಿಯಿಂದ ಜಿಲ್ಲೆಯಲ್ಲಿ ನಾಲ್ಕೈದು ಸಾವಿನ ಪ್ರಕರಣ ದಾಖಲಾಗಿವೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಮೌಖಿಕವಾಗಿ ಮಾತನಾಡಿದ್ದು ಕಳಪೆ ಕಾಮಗಾರಿ ಕುರಿತು ತನಿಖೆ ಮಾಡಿಸುವಂತೆ ಪತ್ರ ಬರೆದು ಆದೇಶ ಮಾಡಿಸುತ್ತೇನೆ. ಹಿಂದೆ ಆಡಳಿತ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿದರೆ ಸಮಸ್ಯೆ ಬರುತ್ತಿರಲಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಕಲ್ಲೂರು ಗ್ರಾಮಸ್ಥರು ಪ್ರತ್ಯೇಕವಾಗಿ ಬೈಪಾಸ್ ರಸ್ತೆ ನಿರ್ಮಿಸುವಂತೆ ಶಾಸಕರಿಗೆ ಮನವಿ ಮಾಡಿದರು.
ಈ ಸಂದರ್ಭ ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಪಂ ಇಒ ಸಂತೋಷ ಪಾಟೀಲ್, ಅಧಿಕಾರಿಗಳಾದ ಐ.ಎಸ್.ಹೊಸೂರು, ಪ್ರಾಣೇಶ ಹಾದಿಮನಿ, ಚನ್ನಪ್ಪ, ಸಚಿನ್ ಪಾಟೀಲ್, ಸಂಜಯ ಚಿತ್ರಗಾರ, ಸಿಂಧು ಎಲಿಗಾರ, ಪದ್ಮನಾಭ, ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚಂಡೂರ, ಕೆರಿಬಸಪ್ಪ ನಿಡಗುಂದಿ, ಕಲ್ಲಪ್ಪ ಕವಳಕೇರಿ, ವರದಯ್ಯ ಹಿರೇಮಠ, ಫರೀದಾಬೇಗಂ, ಶರಣಪ್ಪ ಗಾಂಜಿ, ಶಿವನಗೌಡ ದಾನರಡ್ಡಿ, ಕಳಕೇಶ ಸೂಡಿ ಸೇರಿದಂತೆ ಇತರರಿದ್ದರು.
=======

0/Post a Comment/Comments