ಸಾರ್ವಜನಿಕರ ಆರೋಗ್ಯದ ಬಗ್ಗೆ ಅರಿವು ಮೂಡಿಸಿ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ತಾಲೂಕಿನಲ್ಲಿ ಕಲುಷಿತ ನೀರು ಕುಡಿದು ಸಾರ್ವಜನಿಕರಿಗೆ ವಾಂತಿ ಭೇದಿ ಪ್ರಕರಣ ಕಂಡು ಬಂದಿದ್ದು, ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಅಧಿಕಾರಿಗಳು ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ ಹೇಳಿದರು.
ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ತಾಪಂ, ಜಿಪಂನ ವಿವಿಧ ಯೋಜನೆ ಕುರಿತು ಇಲಾಖಾವಾರು ಪ್ರಗತಿ ಪರಿಶೀಲನೆ ಸಭೆ ಹಾಗೂ ಮುಂಬರುವ ಜಿಪಂ ಕೆಡಿಪಿ ಸಭೆಯ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಯಲಬುರ್ಗಾ-ಕುಕನೂರ ತಾಲೂಕಿನ ಹಳ್ಳಿಗಳಲ್ಲಿ ಕಲುಷಿತ ನೀರು ಸೇವನೆಯಿಂದ ಒಟ್ಟು ೧೦೫ ವಾಂತಿಭೇದಿ ಪ್ರಕರಣ ಕಂಡು ಬಂದಿದ್ದು, ಸ್ಥಳದಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ತೆರೆದು ಚಿಕಿತ್ಸೆ ನೀಡಲಾಗಿದೆ. ಮುಂದೆ ವಾಂತಿಭೇದಿ ಪ್ರಕರಣಗಳು ಸಂಭವಿಸದಂತೆ ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಸಂಬಂಧಿಸಿದ ಗ್ರಾಪಂ ಪಿಡಿಒ, ಕಂದಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಲು ಸೂಚಿಸಿದರು.
ಯಲಬುರ್ಗಾ-ಕುಕನೂರು ತಾಲೂಕಿನಲ್ಲಿ ಸ್ಥಗಿತಗೊಂಡ ಶುದ್ಧ ನೀರಿನ ಘಟಕ ದುರಸ್ತಿಪಡಿಸಿ ಸಾರ್ವಜನಿಕರಿಗೆ ಶುದ್ಧ ನೀರು ಒದಗಿಸಬೇಕು. ಈ ಕುರಿತು ಎರಡು ದಿನಗಳಲ್ಲಿ ಸಮಗ್ರ ಮಾಹಿತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಮುಖ್ಯಲೆಕ್ಕಾಧಿಕಾರಿ ಅಮಿನ್ ಅತ್ತಾರ್ ಮಾತನಾಡಿ, ನರೇಗಾದಡಿ 2023-24ನೇ ಸಾಲಿನಲ್ಲಿ 7 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, ಈಗಾಗಲೇ 3,61,727 ಸೃಜಿಸಿ ಶೇ.118.25 ರಷ್ಟು ಗುರಿ ಸಾಧಿಸಿದೆ. ಮಹಿಳೆಯರ ಭಾಗವಹಿಸುವಿಕೆ ಶೇ.50.82 ರಷ್ಟಿದೆ. 22 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಅಂದಾಜು ೧೦ ಸಾವಿರ ಕೂಲಿಕಾರರಿಗೆ ಕೆಲಸ ಕೊಡಲಾಗುತ್ತಿದೆ. ಮಾನವ ದಿನಗಳ ಸೃಜನೆಯಲ್ಲಿ ಕಡಿಮೆ ಪ್ರಗತಿ ಸಾಧಿಸಿದ ಹಿರೇವಂಕಲಕುಂಟಾ ಹಾಗೂ ಆಧಾರ್ ಸಿಡಿಂಗ್‌ನಲ್ಲಿ ವಜ್ರಬಂಡಿ ಮತ್ತು ಇತರೆ ಗ್ರಾಪಂಗಳ ಪ್ರಗತಿ ಕಡಿಮೆ ಇದ್ದು ಎರಡು ದಿನದೊಳಗೆ ಸಾಧಿಸಲು ತಿಳಿಸಿದರು.
ತಾಲೂಕಿನಲ್ಲಿ ವಿವಿಧ ಲೆಕ್ಕ ಶೀರ್ಷಿಕೆ, ಯೋಜನೆಗಳಡಿ ನಿರ್ಮಾಣಗೊಳ್ಳುತ್ತಿರುವ ಅಂಗನವಾಡಿಗಳ ಮಾಹಿತಿ, ಅನೈರ್ಮಲ್ಯದ ಸ್ಥಿತಿ ಇರುವ ಕೇಂದ್ರಗಳ ಪಟ್ಟಿ ನೀಡುವಂತೆ ತಿಳಿಸಿದರು. ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಗಳ ಮಾಹಿತಿ, ಇ-ಕೆವೈಸಿ ತುರ್ತಾಗಿ ಪ್ರಗತಿ ಸಾಧಿಸಬೇಕೆಂದರು.
ಈ ಸಂದರ್ಭ ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಪಂ ಇಒಗಳಾದ ಸಂತೋಷ ಪಾಟೀಲ್, ರಾಮಣ್ಣ ದೊಡ್ಡಮನಿ, ಸಹಾಯಕ ನಿರ್ದೇಶಕ ಎಫ್.ಡಿ.ಕಟ್ಟಿಮನಿ ಇದ್ದರು.

0/Post a Comment/Comments