೪೬ ವರ್ಷದ ಕಳಕಪ್ಪ ಆರಬಳ್ಳಿನ ೧೦೮ ಕೆ.ಜಿ. ತೂಕದ ಅಕ್ಕಿಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತುವ ಮೂಲಕ ವಿಶೇಷ ಸಾಧನೆ ಮಾಡಿದರು


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಭಾರದ ಚೀಲ ಹೊರುವುದು, ಎತ್ತಿನೊಂದಿಗೆ ಹೆಗಲು ಕೊಟ್ಟು ಗಳೆ ಎಳೆಯುವುದು, ಟ್ರ್ಯಾಕ್ಟರ್ ಎಳೆಯುವುದು, ಸಂಗ್ರಾಣಿ ಕಲ್ಲು ಎತ್ತುವುದು ಹೀಗೆ ಹಲವಾರು ಸಾಹಸ ಪ್ರದರ್ಶನ ಮಾಡುವ ಮೂಲಕ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಯುವಕರು, ವ್ಯಕ್ತಿಗಳು ಇತ್ತೀಚಿನ ದಿನಮಾನಗಳಲ್ಲಿ ಜಿಲ್ಲೆ, ರಾಜ್ಯದ ಗಮನ ಸೆಳೆದಿದ್ದಾರೆ.
ಗ್ರಾಮದ ಕಳಕಪ್ಪ ಆರಬಳ್ಳಿನ ಎನ್ನುವ ೪೬ ವರ್ಷದ ವ್ಯಕ್ತಿ ೧೦೮ ಕೆ.ಜಿ. ತೂಕದ ಅಕ್ಕಿಚೀಲ ಹೊತ್ತು ಗಂಗಾವತಿ ಸಮೀಪದ ಅಂಜನಾದ್ರಿ ಬೆಟ್ಟ ಹತ್ತುವ ಮೂಲಕ ಬುಧವಾರ ವಿಶೇಷ ಸಾಧನೆ ಮಾಡಿದ್ದಾನೆ. ಕಳೆದ ವಾರ ಅದೇ ಗ್ರಾಮದ ೩೪ ವರ್ಷದ ಹನುಮಂತಪ್ಪ ನಿಂಗಪ್ಪ ಪೂಜಾರ ೧೦೫ ಕೆ.ಜಿ. ಅಕ್ಕಿಚೀಲ ಹೊತ್ತು ೫೦ ನಿಮಿಷದಲ್ಲಿ ಅಂಜನಾದ್ರಿ ಬೆಟ್ಟ ಏರಿದ್ದ. ಚಂದ್ರಪ್ಪ ಕಲ್ಗುಡಿ ಎನ್ನುವ ೧೯ ವರ್ಷದ ಯುವಕ ಸಮೀಪದ ಕಾಲಕಾಲೇಶ್ವರ ದೇವಸ್ಥಾನದ ಪಾದಗಟ್ಟೆಯಿಂದ ೧೦೭ ಕೆ.ಜಿ. ತೂಕದ ಅಕ್ಕಿಚೀಲ ಹೊತ್ತು ದೇವರ ದರ್ಶನ ಪಡೆದಿದ್ದನ್ನು ಸ್ಮರಿಸಬಹುದು.
--
ಅತಿಯಾದ ನವಮಾಧ್ಯಮಗಳ ಬಳಕೆಯಿಂದ ಯುವಕರಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಸಾಹಸ ಪ್ರದರ್ಶನಗಳು ಕಣ್ಮರೆಯಾಗುತ್ತಿವೆ. ಅತಿಯಾದ ಭಾರ ಎತ್ತುವುದು, ದೈಹಿಕ ಫಿಟ್ನೆಸ್‌ಗಾಗಿ ನಡೆಯುವ ಜೂಜಾಟಗಳು ಕಡಿಮೆಯಾಗಿದೆ. 
--
ದುಶ್ಚಟದಿಂದ ದೂರವಾಗಿಸಲು ಸಾಹಸ ಪ್ರದರ್ಶನ:
ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಆರೋಗ್ಯ ಕಡೆಸಿಕೊಳ್ಳುತ್ತಿದ್ದಾರೆ. ಆರೋಗ್ಯ ಸುಧಾರಣೆ ಮತ್ತು ಅವರನ್ನು ಸರಿ ದಾರಿಗೆ ತರಲು ಇಂಥ ಸಾಹಸ ಮಾಡಲಾಗುತ್ತಿದೆ. ದೇವಸ್ಥಾನಗಳಿಗೆ ಭಾರದ ಚೀಲ ಹೊತ್ತು ಭಕ್ತಿ ಸಮರ್ಪಿಸುವುದರ ಜತೆಗೆ ಯುವಕರಲ್ಲಿ ದೈಹಿಕ ಮಾನಸಿಕ ಚಟುವಟಿಕೆ ಹೆಚ್ಚಾಗಲಿ ಎನ್ನುವುದು ಉದ್ದೇಶವಾಗಿ ಎನ್ನುತ್ತಾರೆ ೧೦೮ ಕೆ.ಜಿ. ಅಕ್ಕಿಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಗ್ರಾಮದ ನಿವಾಸಿ ಕಳಕಪ್ಪ.
--
ಯುವಕರು ದುಶ್ಚಟಗಳಿಂದ ದೂರವಿರಬೇಕು. ಒಳ್ಳೆಯ ಆಹಾರ ಸೇವಿಸುವ ಮೂಲಕ ಆರೋಗ್ಯವಂತ ಜೀವನ ನಡೆಸಬೇಕು. ಹಿರೇಮ್ಯಾಗೇರಿ ಯುವಕರು, ವ್ಯಕ್ತಿಗಳು ಭಾರದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿರುವುದು ಖುಷಿ ತಂದಿದೆ. ಸಾಹಸ ನೋಡಲು ಯುವಕರೊಂದಿಗೆ ನಾನೂ ಹೋಗಿದ್ದೆ.
-ಶರಣಪ್ಪ ಅಣ್ಣಿಗೇರಿ, ನಿಂಗರಾಜ ಗಾಣಿಗೇರ್, ಗ್ರಾಮಸ್ಥರು ಹಿರಿಯರು,
--
೧೦೮ ಕೆ.ಜಿ. ತೂಕದ ಅಕ್ಕಿಚೀಲ ಹೊತ್ತು ಒಂದು ತಾಸಿನಲ್ಲಿ ೫೭೫೭ ಮೆಟ್ಟಿಲೇರಿ ಆಂಜನೇಯ ಸ್ವಾಮಿ ದರ್ಶನ ಪಡೆದಿರುವುದು ಖುಷಿ ನೀಡಿದೆ. ಇದಕ್ಕೆ ಗ್ರಾಮದ ಯುವಕರು ಸಾಥ್ ನೀಡಿದ್ದಾರೆ. ಯುವಕರನ್ನು ದುಶ್ಚಟಗಳಿಂದ ದೂರ ಮಾಡಲು ಇಂಥ ಸಾಹಸ ಮಾಡಲಾಗುತ್ತಿದೆ. ಈಗ ಗ್ರಾಮದ ಯುವಕರು ತುಂಬಾ ಸುಧಾರಿಸಿದ್ದಾರೆ.
-ಕಳಕಪ್ಪ ಆರಬೆರಳಿನ್, ೧೦೮ ಕೆ.ಜಿ. ಭಾರದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹಿರೇಮ್ಯಾಗೇರಿ ನಿವಾಸಿ.
--

0/Post a Comment/Comments