ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ:ಮಹಿಳೆಯರ ಸಮಗ್ರ ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಬಿಜೆಪಿಗರಿಗೆ ಇಲ್ಲ. ಹೀಗಾಗಿ ಬರುವ ಚುನಾವಣೆಯಲ್ಲಿ ಬಿಜೆಪಿಗೆ ಮಹಿಳೆಯರು ತಕ್ಕಪಾಠ ಕಲಿಸಬೇಕು ಎಂದು ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ವಕ್ತಾರೆ ಶೈಲಜಾ ಹಿರೇಮಠ ಹೇಳಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಯಲಬುರ್ಗಾ-ಕುಕನೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸರ್ಕಾರಕ್ಕೆ ಎಲ್ಲಾ ವರ್ಗದ ಮಹಿಳೆಯರ ಪ್ರಗತಿ, ಆರ್ಥಿಕವಾಗಿ ಏಳಿಗೆ ಮಾಡುವ ಮನಸ್ಸಿಲ್ಲ. ಜತೆಗೆ ಸ್ತ್ರೀಯರಿಗೆ ಗೌರವ ಕೊಡುವ ಸಂಸ್ಕೃತಿ ಬಿಜೆಪಿಯವರಿಗೆ ಗೊತ್ತಿಲ್ಲ. ಹೀಗಾಗಿ ರಾಜ್ಯದ ಮಹಿಳೆಯರಪರ ಅಭಿವೃದ್ಧಿ ಕಾರ್ಯಕ್ರಮ ಮಾಡದೇ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದರು.
ಈ ಹಿಂದೆ ಕಾಂಗ್ರೆಸ್ ಮಹಿಳಾ ಧ್ವನಿಯಾಗಿ ಹಿತ ಕಾಪಾಡಿದೆ. ಬಿಜೆಪಿಯವರ ಸುಳ್ಳು ಆಶ್ವಾಸನೆಗೆ ಬಲಿಯಾಗದೆ ಕಾಂಗ್ರೆಸ್ಸಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಬೆಲೆ ಏರಿಕ : ಗ್ಯಾಸ್ ಸಿಲೆಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಬಿಜೆಪಿ ಸರ್ಕಾರ ಜನಸಾಮಾನ್ಯರ ಹೊಟ್ಟೆ ಮೇಲೆ ಬರೆ ಎಳೆದಿದೆ. ಕೋಲಾರದ ಸಂಸದ ಮುನಿಸ್ವಾಮಿ ಎನ್ನುವರು ವಸ್ತು ಪ್ರದರ್ಶನದ ವೇಳೆ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಇಂಥವರು ಮಹಿಳೆಯರ ಮೇಲೆ ಎಷ್ಷರ ಮಟ್ಟಿಗೆ ಗೌರವ ಕೋಡುತ್ತಾರೆ ಎನ್ನುವುದು ನಾಡಿನ ಜನತೆ ಗಮನಿಸಬೇಕು ಎಂದರು.
ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ್ ಮಾತನಾಡಿ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿ ಅನೇಕ ಜನಪರ ಕೆಲಸ ಮಾಡಿದ್ದಾರೆ ಎಂದರು.
ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ರಾಜ್ಯದ ಮಹಿಳೆಯರು, ಜನತೆಗಾಗಿ ಕಾಂಗ್ರೆಸ್ ಪಕ್ಷ ಮೂರು ಗ್ಯಾರಂಟಿ ಪ್ರಾಣಾಳಿಕೆ ಘೋಷಿಸಿದೆ. ಅಧಿಕಾರಕ್ಕೆ ಬಂದ ತಕ್ಷಣವೇ ಈ ಯೋಜನೆ ಅನುಷ್ಠಾನ ಮಾಡುತ್ತೇವೆ.
ಬಡವರಿಗೆ ಉಚಿತವಾಗಿ ಪ್ರತಿ ವ್ಯಕ್ತಿಗೂ ೧೦.ಕೆಜಿ ಅಕ್ಕಿ, ಗೃಹಜ್ಯೋತಿ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ೨೦೦ ಯೂನಿಟ್ ವಿದ್ಯುತ್ ಸೇರಿದಂತೆ ಅನೇಕ ಭರವಸೆ ನೀಡಲಾಗಿದೆ. ಇದಕ್ಕೆ ಸುಮಾರು ೪೦ ಸಾವಿರ ಲಕ್ಷ ಕೋಟಿ ರೂ. ಖರ್ಚು ಮಾಡಲು ಸಿದ್ದರಿದ್ದೇವೆ. ಈ ಬಾರಿ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ತಾವೆಲ್ಲರೂ ಕಾಂಗ್ರೆಸ್ಸಿಗೆ ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಪದಾಧಿಕಾರಿಗಳಾದ ಗಿರಿಜಾ ಸಂಗಟಿ, ಸಾವಿತ್ರಿ ಗೊಲ್ಲರ್, ಹೊಳಿಯಮ್ಮ ಪಾಟೀಲ್, ಗೌರಮ್ಮ ನಾಗನೂರು, ಜಯಶ್ರೀ ಅರಕೇರಿ, ನಂದಿತಾ ದಾನರಡ್ಡಿ, ಶಾರದಾ ಸಾಲಭಾವಿ, ಜಯಶ್ರೀ ಕಂದಕೂರು, ಶರಣಮ್ಮ ಪೂಜಾರ, ಕುಸುಮಾ ಹನುಮಾಪುರ, ಮಲ್ಲಮ್ಮ ಗೊಂದಿ, ಶೋಭಾ ಕುರಿ, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ, ಎ.ಜಿ.ಭಾವಿಮನಿ, ಶರಣಪ್ಪ ಗಾಂಜಿ, ಶಿವನಗೌಡ ದಾನರಡ್ಡಿ, ಸುಧೀರ್ ಕೊರ್ಲಳ್ಳಿ, ಮಲ್ಲು ಜಕ್ಕಲಿ ಸೇರಿದಂತೆ ಇತರರಿದ್ದರು.
=====
Post a Comment