ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಎಲ್ಲಡೆ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದು, ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ಪಕ್ಷವು ಸ್ಪರ್ಧಿಸಲಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಹುಸೇನ್‌ಸಾಬ್ ಗಂಗನಾಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ದೆಹಲಿ ಸಿಎಂ ಕ್ರೇಜಿವಾಲ್ ನೇತೃತ್ವದಲ್ಲಿ ಎಎಪಿ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಂಡಿದ್ದು, ಪಕ್ಷದ ಕಾರ್ಯಕ್ರಮಗಳನ್ನು ಜನ ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರ ಇಲ್ಲದೇ ನಡೆದಿರುವ ಅಭಿವೃದ್ಧಿ ಕೆಲಸಗಳನ್ನು ಇಡೀ ದೇಶದ ಜನ ಮೆಚ್ಚಿಕೊಂಡಿದ್ದಾರೆ. ಇದೊಂದು ಜನಸಾಮಾನ್ಯರ ಪಕ್ಷವಾಗಿದೆ ಎಂದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ಎಎಪಿ ಸ್ಪರ್ಧೆ ಮಾಡಲಿದೆ. ಕ್ಷೇತ್ರದ ಜನರು ಬದಲಾವಣೆ ಬಯಸಿದ್ದು, ನಮ್ಮ ಅಭ್ಯರ್ಥಿ ಗೆಲುವು ಪಡೆಯುವ ವಿಶ್ವಾಸವಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಜನರನ್ನು ಮೋಸಗೊಳಿಸಿವೆ. ಜನ ಎಎಪಿ ಬೆಂಬಲಿಸಲಿದ್ದಾರೆ ಎಂದರು.
--
ಹಿರಿಯ ಪತ್ರಕರ್ತ ಮೌಲಾಹುಸೇನ್ ಬುಲ್ಡಿಯಾರ್ ಎಎಪಿ ಸೇರ್ಪಡೆ:
ಕಳೆದ ಮೂವತ್ತು ವರ್ಷಗಳಿಂದ ವಿವಿಧ ಸಂಘಟನೆ, ಪಕ್ಷಗಳಲ್ಲಿ ಕೆಲಸ ಮಾಡಿರುವ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ಮೌಲಾಹುಸೇನ್ ಬುಲ್ಡಿಯಾರ್ ಎಎಪಿ ಸೇರಿದರು. ಎಎಪಿ ಜಿಲ್ಲಾಧ್ಯಕ್ಷ ಹುಸೇನಸಾಬ ಗಂಗನಾಳ ಮತ್ತು ಮುಖಂಡರು ಪಕ್ಷಕ್ಕೆ ಬರಮಾಡಿಕೊಂಡು, ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಪಕ್ಷದ ಸೇವಾಕಾಂಕ್ಷಿಯಾಗಿದ್ದಾರೆ ಎಂದು ಘೋಷಿಸಿದರು.
ಪತ್ರಕರ್ತ ಮೌಲಾಹುಸೇನ್ ಬುಲ್ಡಿಯಾರ್ ಮಾತನಾಡಿ, ಕ್ಷೇತ್ರದಲ್ಲಿ ಜನರು ಪರ್ಯಾಯ ರಾಜಕಾರಣದೊಂದಿಗೆ ಬದಲಾವಣೆ ಬಯಸಿದ್ದಾರೆ. ಸದಾ ಜನರನ್ನು ಮೋಸಗೊಳಿಸುತ್ತಾ ಅಧಿಕಾರದಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಪ್ರಾಮಾಣಿಕ ಕಾರ್ಯಕರ್ತರಿಗೆ ಗೌರವ ಇಲ್ಲ.
ಈ ಚುನಾವಣೆಯಲ್ಲಿ ಎಎಪಿಯ ಕಾರ್ಯಕ್ರಮ ಜನರಿಗೆ ತಲುಪಿಸುವ ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಭ್ರಷ್ಟಚಾರ, ಅನ್ಯಾಯದ ಬಗ್ಗೆ ಮನೆ ಮನೆಗೆ ಮುಟ್ಟಿಸುವ ಮೂಲಕ ಮೂರನೇ ರಾಜಕೀಯ ಶಕ್ತಿ ಹುಟ್ಟುಹಾಕಲಾಗುವುದು ಎಂದರು.
ಈ ಸಂದರ್ಭ ಎಎಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಶೆಟ್ಟರ್, ಸಂಘಟನಾ ಕಾರ್ಯದರ್ಶಿ ಲೋಹಿತ್ ರಾಮಶೆಟ್ಟರ್, ಮುಖಂಡರಾದ ಫಕೀರಪ್ಪ ಲಿಂಗದಳ್ಳಿ, ಗುರುಮೂರ್ತಿ, ವೆಂಕಟೇಶ, ಎಂ.ಡಿ.ಅಮ್ಮುನ್ ಖಾಜಿ ಇತರರು ಇದ್ದರು.
--
Post a Comment