ದಲಿತರ ಮನೆಯ ಬೆಂಕಿಯಿಂದ ಪ್ರತಿ ಮನೆಯ ಹೋಳಿಯ ಹಬ್ಬದೂಟ ತಯಾರಾಗುವ ಸಾಮರಸ್ಯದ ಸಂಪ್ರದಾಯ- ಬಾಗಲಕೋಟೆ ಹೋಳಿ


ಪ್ರಗತಿವಾಣಿ, ಬಾಗಲಕೋಟ
ಸಾಮರಸ್ಯದ ಹೋಳಿ ಅಂದರೆ ಬಾಗಲಕೋಟೆ, ಬಾಗಲಕೋಟೆ ಅಂದರೆ ಹೋಳಿಯ ತವರು.
ಮುಳುಗಡೆ ನಗರಿ ಆಲಮಟ್ಟಿ ಜಲಾಶಯದ ಹಿನ್ನಿರಿನ ಕಾರಣವಾಗಿ ಇಡೀ ಏಷಿಯಾ ಖಂಡದಲ್ಲಿಯೇ ಬಹು ದೊಡ್ಡ ನಗರವೊಂದು ತಲ್ಲಣಕ್ಕೊಳಗಾಗಿ ಈಗ ಸುಂದರವಾಗಿ ರೂಪಿತವಾಗುತ್ತಿರುವುದು ಒಂದು ದಾಖಲೆಯೆ ಸರಿ. ಘಟಪ್ರಭಾ ನದಿಯ ದಡದಲ್ಲಿರುವ ಈ ನಗರವು ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ ಕೃಷ್ಣಾ ನದಿಗೆ ಸೇರಿಕೊಂಡು ಕೋಟೆಯ ಬಾಗಿಲಿಗೆ ಬಾಗಿನ ಅರ್ಪಿಸಿದಂತಾಗಿದೆ. 

  ಪೌರಾಣಿಕ ಹಿನ್ನಲೆ
 ಬಾಗಲಕೋಟೆಯು  ರಾಮಾಯಣ ಕಾಲದಿಂದಲೂ ಚಾಲ್ತಿಯಲ್ಲಿದ್ದ ಊರು. ಲಂಕಾಧಿಪತಿ ರಾವಣಾಸುರನು ಭಜಂತ್ರಿ ವಾದ್ಯಗಾರರಿಗೆ ದಾನವಾಗಿ ನೀಡಿದ ಊರು.

 ಇತಿಹಾಸ
 ಭಜಂತ್ರಿಯವರ ಶಹನಾಯಿ ವಾದನಕ್ಕೆ ಸವಣೂರು ನವಾಬನಿಂದ ಬೆಳ್ಳಿಯ ಶಹನಾಯಿಯನ್ನು ಬಹುಮಾನವಾಗಿ ಪಡೆದುಕೊಂಡಿದ್ದರು. 1664 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣದ ಬೀಂಜಿ ಕೋಟೆಗೆ ಹೋಗುವಾಗ ಈ ನಗರಕ್ಕೆ ಭೇಟಿ ಕೊಟ್ಟಿದ್ದರೆಂದು ಇತಿಹಾಸ ಹೇಳುತ್ತದೆ. ವಿಜಾಪುರದ ಆದಿಲಶಾಹಿ ಅರಸರು ಈ ಊರನ್ನು ತಮ್ಮ ಮಗಳಿಗೆ ಬಳೆ ತೊಡಿಸುತ್ತಿದ್ದ ಬಳೆಗಾರನಿಗೆ ಉಂಬಳಿಯಾಗಿ ಕೊಟ್ಟಿದ್ದರಂತೆ, ಅದಕ್ಕಾಗಿ ಈ ಊರಿಗೆ ಬಾಂಗಡಿ ಕೋಟೆ (ಬಾಂಗಡಿ ಅಂದರೆ ಬಳೆ) ಎಂದೂ ಮುಂದೆ ಬಾಗಲಕೋಟೆಯೆಂದು ಹೆಸರಾಯಿತು ಎಂಬ ಪ್ರತೀತಿ ಇದೆ.

 ಬಾಗಲಕೋಟೆಯ ಇತಿಹಾಸ ಮತ್ತು ಸಂಸ್ಕೃತಿ ಅಭ್ಯಸಿಸಿದಾಗ ಇಲ್ಲಿ ಸರ್ವಧರ್ಮಿಯರು ಕೂಡಿ ಬಾಳಿ ದೇಶಕ್ಕೆ ಭಾವೈಕ್ಯತೆಯ ಸಂದೇಶ ಸಾರಿದ ಕೀರ್ತಿ ಈ ನಗರಕ್ಕಿದೆ. 
    
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವೀರ ಸಾವರ್ಕರ್ ಅವರು ಬಂದು ವಿದೇಶಿ ಬಟ್ಟೆ, ವಸ್ತುಗಳನ್ನು ಸುಟ್ಟು ಹೋಳಿ ಆಚರಿಸಿದ್ದರಂತೆ. ಹಾಗೇನೆ ‘ಅಸಹಕಾರ ಚಳವಳಿ’ ಬಗ್ಗೆ ಜನಾಭಿಪ್ರಾಯ ಮೂಡಿಸುವ ಸಲುವಾಗಿ ಗಾಂಧೀಜಿಯವರು ಬಾಗಲಕೋಟೆಗೆ ಬಂದಿದ್ದರು.1921 ಮೇ 28 ರಂದು ಗಾಂಧೀಜಿಯವರು ಬಾಗಲಕೋಟೆಗೆ ಬಂದಾಗ ಆ ಕಾಲಕ್ಕೆ ಒಂದು ಸಾವಿರ ರೂ.ಗಳ ನಿಧಿಯನ್ನು ಅರ್ಪಿಸಲಾಗಿತ್ತು.1931 ರಲ್ಲಿ ಪಂಡಿತ ಜವಾಹರಲಾಲ ನೆಹರೂ ಬಾಗಲಕೋಟೆಯ ಹಿಂದೂಸ್ಥಾನ ಸೇವಾದಳಕ್ಕೆ ಭೇಟಿಕೊಟ್ಟಿದ್ದರು. ಐತಿಹಾಸಿಕ ಸೇವಾದಳ ಕಟ್ಟಡ ಮುಳುಗಡೆಯಾಗಿ ಅದರ ಪ್ರತಿರೂಪ ನವನಗರದಲ್ಲಿ ನಿರ್ಮಿಸಲಾಗಿದೆ. ಸರ್ದಾರ್ ವಲ್ಲಭ ಬಾಯಿ ಪಟೇಲರು ಭಾಷಣ ಮಾಡಿದ ಜಾಗದಲ್ಲಿ ವಲ್ಲಭ ಬಾಯ್ ಚೌಕ ಕಟ್ಟಲಾಗಿದೆ.

ಮರಾಠ ದೊರೆಗಳ ಕಾಲದಲ್ಲಿ ಕಟ್ಟಲಾಗಿದ್ದ ಶಿರೂರು ಅಗಸಿಯು ಮುಳುಗಡೆ ಸನಿಹದಲ್ಲಿದ್ದು, ಅದನ್ನು ಸಂಗಮ ಕ್ರಾಸ್ ಬಳಿ ಬೃಹತ್ತಾಗಿ ಕಟ್ಟಲಾಗಿದೆ. ಮುಳುಗಡೆ ಊರಿನ ಹಿಂದಿನ ಸಂಸ್ಕೃತಿಯನ್ನು ಮರು ಸ್ಥಾಪಿಸಲು ಊರ ಜಾತ್ರೆ, ಹಬ್ಬ ಹರಿದಿನ, ಓಕಳಿ ಮೊದಲಾದವುಗಳನ್ನು ನಗರದ ಯುವ ಜನಾಂಗವು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ. ಇಂಥ ಆಚರಣೆಗಳಲ್ಲಿ ಬಾಗಲಕೋಟೆಯ ಹೋಳಿ ಹಬ್ಬವೂ ಒಂದು.

ಊರು ಮುಳುಗಿದರು ಮುಳುಗದ ಹೋಳಿ
ಬಾಗಲಕೋಟೆ ಯುವಕರ ತವರು ಹಬ್ಬವಾಗಿರುವ ಹೋಳಿ ಸನಾತನ ಸಂಪ್ರದಾಯಗಳನ್ನು  ಚಾಚೂ ತಪ್ಪದೆ ವಿಶೇಷವಾಗಿ ಆಚರಿಸುತ್ತ ಬಂದಿದೆ. ಇಡೀ ದೇಶದಲ್ಲಿಯೇ ಬಾಗಲಕೋಟೆಯ ಹೋಳಿ ಆಚರಣೆಗೆ ಒಂದು ವಿಶಿಷ್ಟತೆ ಇದೆ. ಹೋಳಿ ಹಬ್ಬ ಆಚರಿಸುವ ಕಲ್ಕತ್ತಾ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದರೆ, ಇದಕ್ಕೆ  ದೋಲ್ ಪೌರ್ಣಮಿ ಎನ್ನುತ್ತಾರೆ. ಐದು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಯುವಕರ ಬಾಗಲಕೋಟೆ ಎರಡನೇಯ ಸ್ಥಾನದಲ್ಲಿದೆ. ಕಿಲ್ಲಾ, ಹಳಪೇಟ, ಹೊಸಪೇಟ, ಜೈನಪೇಟ, ಶಿರೂರ ಅಗಸಿ, ಶಾಂತಿನಗರ, ಸ್ಟೆಷನ, ವಾಟರ ಟ್ಯಾಂಕ, ನವನಗರ, ವಿದ್ಯಾಗಿರಿ ಹಾಗೂ ಗದ್ದನಕೇರಿ etc. ಸ್ಥಳಗಳು ಹೋಳಿಗೆ ಸೊಬಗು ಒದಗಿಸುತ್ತವೆ. ಈ ಹಬ್ಬದಲ್ಲಿ ಯಾರೂ ಹೊಸ ಬಟ್ಟೆ ಹಾಕಿಕೊಳ್ಳುವುದಿಲ್ಲ. ಚಿತ್ರ-ವಿಚಿತ್ರವಾದ ಬಟ್ಟೆಗಳನ್ನು ಹಾಕಿಕೊಳ್ಳುವುದೆ  ಒಂದ್ ತರಹ ವಿಶೇಷ.

ವಿಶಿಷ್ಟ ಹಲಗೆ ವಾದನ (ರಣವಾಧ್ಯ)  
ಶಿವರಾತ್ರಿ ಅಮವಾಸ್ಯೆಯ ಮರುದಿನದಿಂದಲೇ ಅಖಂಡ ಬಾಗಲಕೋಟೆಯ ಓಣಿ ಓಣಿಗಳಲ್ಲಿ ಹಲಗೆಯ ಸಪ್ಪಳ ಕೇಳಿ ಬರುತ್ತದೆ. ಸುಮಾರು 15 ದಿನಗಳ ಕಾಲ, ಹಗಲು ರಾತ್ರಿ ಎನ್ನದೇ ಎಲ್ಲಿ ನೋಡಿದರು ಬರಿ ಹಲಗೆಯ ಸದ್ದು ಕೇಳುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ "ಹಲಗೆ ಮಜಲು ಸ್ಪರ್ಧೆ " ಇಡುವುದು ಸಂಪ್ರದಾಯವಾಗಿದೆ. ಹಲಗೆ ವಾದನ ಕೇಳುವುದೇ ಒಂದು ಸಂಭ್ರಮ. ಹಿರಿಕಿರಿಯರೆನ್ನದೇ ಎಲ್ಲ ವಯೋಮಾನದವರು ಇಲ್ಲಿ ಹಲಗೆ ನುಡಿಸುತ್ತಾರೆ. ಹಲಗೆ ವಾದನ ಪ್ರಾರಂಭವಾಗುವದು ಶಹನಾಯಿ ನುಡಿಸುವದರೊಂದಿಗೆ ಮುಖ್ಯ ಕಲಾವಿದನೊಬ್ಬ ದೊಡ್ಡ ಹಲಗೆಯನ್ನು ಹಿಡಿದು ನೃತ್ಯಕ್ಕೆ ಚಾಲನೆ ನೀಡುತ್ತಾನೆ. ಜೊತೆಗೆ ಚಿಕ್ಕ ಹಲಗೆಯವರು ಸಾಥ ನಿಡುತ್ತಾರೆ. ಡಗ್ಗಾ, ಝುಮರಿ, ಚಳ್ಳಮ, ಝೆಲ್ಲರಿ(ಗೆಜ್ಜೆ), ಕಣಿಯ ವಾದಕರು ಕ್ರಮಬದ್ದವಾಗಿ ವಾದನ ಮಾಡಿದಾಗ ಕೇಳಲು ತುಂಬ ಹಿತವೆನಿಸುತ್ತದೆ. ರಣವಾಧ್ಯದ ತರಹ ಎಲ್ಲಾ ಕಡೆ ಪ್ರತಿಧ್ವನಿಸುತ್ತದೆ. ಈ 15 ದಿನಗಳ ಕಾಲ ಹೊಕೊಳೊದು(ಲಬೋ ಲಬೋ) ಸರ್ವೆಸಾಮಾನ್ಯವಾಗಿರುತ್ತದೆ. 

ಕಾಮದಹನ : 
ಮೊದಲು ದಲಿತ ಕುಟುಂಬದ ಮೆನೆಯಿಂದ ಬೆಂಕಿ ತಂದು ಕಿಲ್ಲಾ ಗಲ್ಲಿಯಲ್ಲಿನ ಹುಬ್ಬಾ ನಕ್ಷತ್ರ ಗೋಚರಿಸುವ ನಸುಕಿನ ಜಾವದಿಂದ ರಾತ್ರಿ 10 ಗಂಟೆಯವರೆಗೆ ಬಾಗಲಕೋಟೆ ತುಂಬಾ ವಿವಿಧ ಗಲ್ಲಿ ಗಲ್ಲಿಗಳಲ್ಲಿ ಕಾಮದಹನವಾಗುತ್ತವೆ.

ಇಡೀ ಊರಿನ ಕಾಮ ದಹನ, ಸೋಗಿನ ಬಂಡಿ, ಬಣ್ಣ ಆರಂಭವಾಗುವುದು ಕಿಲ್ಲಾ ಓಣಿಯಿಂದ ನಂತರ ಎಲ್ಲ ಓಣಿಗಳು.  ಕಾಮನನ್ನು ಸುಡುವುದಕ್ಕಾಗಿ ಹುಡುಗರು ಓಣಿಯ ಮನೆಮನೆಯಲ್ಲೂ ಕಣ್ಣು ತಪ್ಪಿಸಿ ಕುಳ್ಳು,ಕಟ್ಟಿಗೆ,ನಿಚ್ಚಣಿಕೆ ಕದ್ದು ತಂದು ಒಂದೆಡೆ ಕೂಡಿ ಹಾಕಿ, ಹುಣ್ಣಿಮೆ ಹಿಂದಿನ ದಿನ ಒಂದು ಬಿದಿರಿನ ಚಟ್ಟ ತಯಾರಿಸಿ ಒಬ್ಬನನ್ನು ಹೆಣದಂತೆ ಮಲಗಿಸಿ " ಕಾಮಣ್ಣ ಸತ್ತಾನ ಭಿಮಣ್ಣ ಅಳತಾನ" ಎಂದು ಎಲ್ಲರೂ ಅಳುತ್ತ ಮನೆಗೆ ಹೋಗಿ ಕಟ್ಟಿಗೆ ಬೇಡುವ ಸಂಪ್ರದಾಯವಿದೆ. ನಗರದ ಹೋಳಿ ಹಬ್ಬದ ವಿಶೇಷವೆಂದರೆ ನಿಶಾನಿ, ತುರಾಯಿ ಹಲಗೆ ಹಾಗೂ ಕಾಮದಹನಕ್ಕೆ ಕಿಚ್ಚು ತರುವ ಮೆರವಣಿಗೆ. ಈ ಸಂಪ್ರದಾಯಕ್ಕೆ ನೂರಾರು ವರ್ಷಗಳ ಇತಿಹಾಸವೂ ಇದೆ. ಸಾಮರಸ್ಯದ ಮೂಲ ಬೇರು ಇದೆನೆ.

ಹೋಳಿ ಹುಣ್ಣಿಮೆ ಆಚರಣೆಗೆ ಪೇಶ್ವೆಯರ ಕಾಲದಲ್ಲಿ ನಗರದ ಪ್ರತಿಷ್ಠಿತ ಮನೆತನಗಳಿಗೆ
ಬಾಬುದಾರರು ಎಂಬ ವಿಶೇಷ ಅಭಿದಾನವಿತ್ತು. ಹೋಳಿ ಹಬ್ಬ ಆಚರಣೆಗೆ ಈ ಮನೆತನಗಳ ಮೂಲಕ ನಿಶಾನೆ, ತುರಾಯಿ ಹಲಗೆ ಮೆರವಣಿಗೆಯೊಂದಿಗೆ ಕಾಮ ದಹನಕ್ಕೆ ಬೆಂಕಿ ತರುವ ಪದ್ಧತಿ ಬೆಳೆದು ಬಂತು.

ನಗರದ ರಾಮರಾವ್ ಕುಲಕರ್ಣಿ ಅವರ ಮನೆತನ, ಶೆಟ್ಟರ್, ಸರನಾಡಗೌಡ, ದೇಸಾಯಿ ಹಾಗೂ ಖಾತೇದಾರರ ಮನೆತನಗಳು ಬಾಬುದಾರಿಕೆ ಪಡೆದಿವೆ. ಕುಲಕರ್ಣಿ ಅವರ ಮನೆಯಲ್ಲಿ ಪೂಜೆಗೊಳ್ಳುವ ನಿಶಾನೆಗಳು (ರೇಷ್ಮೆ ಬಟ್ಟೆ ಧ್ವಜ ಮಾದರಿ ಲಾಂಛನಗಳು)ಇವು ಗತಕಾಲದ ವಿಜಯದ ಸಂಕೇತಗಳಾಗಿವೆ , ತುರಾಯಿ ಹಲಗೆ (ಚಿನ್ನ, ಬೆಳ್ಳಿ ಲೇಪನ ಹಾಗೂ ಅಲಂಕೃತ ಹಲಗೆ)ಗಳು ಸಕಲ ಮರ್ಯಾದೆಯೊಂದಿಗೆ ಎಲ್ಲ ಬಾಬುದಾರರ ಮನೆಗಳಿಗೆ ತೆರಳುತ್ತವೆ. ಎಲ್ಲ ಕಡೆ ಪೂಜೆ ಕೈಗೊಂಡ ನಂತರ ಖಾತೆದಾರರ ಮನೆ ತಲುಪುತ್ತಾರೆ.  ಆಚರಣೆಯ ಬಾಬುದಾರರಾದ ಖಾತೆದಾರರ(ದಲಿತ ಕುಟುಂಬದ) ಮನೆಯಿಂದಲೇ ಬೆಂಕಿ ತಂದು ಕಾಮದಹನ ಮಾಡಲಾಗುತ್ತದೆ. ಕಳೆದ ಏಳು ತಲೆಮಾರುಗಳಿಂದ ಖಾತೆದಾರ(ದಲಿತ ಕುಟುಂಬ) ಅವರ ಮನೆಯಿಂದಲೇ ಕಾಮದಹನಕ್ಕೆ ಬೆಂಕಿ ತರುವುದು ವಿಶೇಷ. ಸಕಲ ಹಿಂದು ಸಮಾಜದ ಒಂದೊಂದು ಜವಾಬ್ದಾರಿಗಳು ಅನಾದಿಕಾಲದಿಂದಲೂ ಚಾಲ್ತಿಯಲ್ಲಿದೆ. ಏನಂದರೆ ಆ ನಿಶಾನೆಗಳನ್ನು ಬಾರಕೇರ ಮನೆತನದವರು, ಕಾಮನನ್ನು ಜೋಡಿಸುವುದು ಉಪ್ಪಾರ ಮನೆತನದವರು, ನಿಶಾನೆಗಳು ಇರುವುದು ಮಡಿವಾಳ ಅವರ ಮನೆಯಲ್ಲಿ, ಕಾಮನ್ನನ ಚಿತ್ರ ತಯಾರಾಗುವುದು ಪತ್ತಾರ ಮನೆಯಲ್ಲಿ, ಹೀಗೆ ಎಲ್ಲರೂ ಒಟ್ಟಾಗಿ ಸೇರಿ ಸಾಮರಸ್ಯದಿಂದ ಊರ ಹಬ್ಬವನ್ನಾಗಿ ಆಚರಿಸಲು ಹಿಂದೆಯೆ ನಡೆದುಕೊಂಡು ಬಂದಿದೆ. ಈಗಲೂ ಅದೇ ಸಾಮರಸ್ಯದ ಸಂಪ್ರದಾಯ ನಡೆದುಕೊಂಡು ಹೋಗುತ್ತಿದೆ.

  ಹೋಳಿ ಹುಣ್ಣಿಮೆಯ ದಿನ ಹುಬ್ಬಾ ನಕ್ಷತ್ರದ ನಸುಕಿನ ಜಾವದಲ್ಲಿ ಕಿಲ್ಲೆಯಿಂದ ಆರಂಭವಾದ ಕಾಮದಹನವು ಇಡೀ ದಿನ ರಾತ್ರಿಯವರೆಗೂ ನಗರದ ವಿವಿಧ ಓಣಿ ಮತ್ತು ಬಡಾವಣೆಗಳಲ್ಲಿ ಪ್ರಮುಖ ಕಾಮಣ್ಣರ ದಹನ ನಡೆಯುತ್ತದೆ. ಮೊದಲು ಹೊತ್ತಿಸಿದ ಬೆಂಕಿಯನ್ನೇ ಎಲ್ಲರೂ ತಂದು ಕಾಮದಹನ ಮಾಡುವುದು ವಿಶೇಷ. ಕಾಮದಹನದ ದಿನ ಇಡೀ ಊರಿಗೆ ಊರೆ ದಲಿತರ ಮನೆಯ ಬೆಂಕಿಯಿಂದಲೇ ಹೋಳಿಗೆಯ ಊಟ ತಯಾರಾಗೋದು. ಕಾಮದಹನದ ನಂತರ ಹೋಯ್ಕೊಂಡವರ ಬಾಯಿಗೆ ಹೋಳಿಗೆ ಅಂತ ಮನೆಯವರೆಲ್ಲರೂ ಕೂಡಿ ಊಟ ಮಾಡುವುದಾಗಿದೆ. ಅಸ್ಪೃಶ್ಯತೆ ತೊಲಗಿಸಲು ದಲಿತರು ನಮ್ಮವರೆ ಎಂಬ ಭಾವದ ಸಲುವಾಗಿ ದಲಿತರ ಮನೆಯ ಬೆಂಕಿಯಿಂದ ಕಾಮದಹನ ಕಾಮದಹನದ ಬೆಂಕಿಯಿಂದ ಎಲ್ಲರ ಮನೆಯಲ್ಲಿ ಹೋಳಿಗೆಯ ಹಬ್ಬದೂಟ. ಕಾಮನನ್ನು ಸುಟ್ಟ ದಿವಸ ಅದೇ ಬೂದಿಯಿಂದಲೇ ದೊಡ್ಡವರು ಸಣ್ಣವರೆನ್ನದೇ ಬೂದಿ ಆಟವಾಡುತ್ತಾರೆ. ಜೊತೆಗೆ ಅಂದಿನ ಎಲ್ಲ ಅಡುಗೆಗಳನ್ನು  ಕಾಮಣ್ಣನನ್ನು ಸುಟ್ಟ ಬೆಂಕಿಯಿಂದ ತಯಾರಿಸುವ ಸಂಸ್ಕೃತಿಯಿದೆ. ದಲಿತರ ಮನೆಯಿಂದ ಬೆಂಕಿ ತರುವುದು ಅಷ್ಟೆಯಲ್ಲದೆ ಅಸ್ಪೃಶ್ಯತೆ ವಿರುದ್ಧ, ಎಲ್ಲರೂ ಒಂದೆ ಎಂಬ ಭಾವ ಸಾರುವ, ಭಾವೈಕ್ಯತೆ ಮೂಡಿಸುವ ಬಾಗಲಕೋಟೆಯ ನಾಡ ಹಬ್ಬವಾಗಿದೆ. 

ಜೊತೆಗೆ ಹಂತಿ ಪದ ಹಾಡುವ ಸಂಪ್ರದಾಯವು ಇದ್ದು ಅರ್ಥಗರ್ಭಿತವಾದ ಹಂತಿ ಪದಗಳನ್ನು ಹಿರಿಯರು ಹಾಡುವುದನ್ನು ಕೇಳುವ ಮಜವೇ ಬೇರೆ. ರಾಶಿಯಾದ ನಂತರ ರೈತರು ಕಟ್ಟಿದ ಜಾನಪದ ಶೈಲಿಯ ಹಾಡುಗಳು ಕೇಳುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಒಂದಕ್ಕೊಂದು ಕೇಳಲು ಬಲು ಸೊಗಸು ಅದನ್ನು ಈಗಿನ ಯುವ ಸಮೂಹ ಕೇಳುತ್ತಾ ಸಾಕಷ್ಟು ಖುಷಿ ಪಡುತ್ತಾರೆ.

ಬಣ್ಣದಲ್ಲಿ ಮುಳಗುವ ಬಾಗಲಕೋಟೆ :
         ಮೂರು ದಿನ ಬಣ್ಣದಾಟ ಒಂದು ವರ್ಷದವರೆಗೂ ನಮ್ಮ ಸ್ಮೃತಿಪಟಲದ ಮೇಲಿರುತ್ತೆ.  ಬಣ್ಣದ ಬಂಡಿಗಳು(ಟ್ಯಾಕ್ಟರಗಳು). ನೂರಾರು ಎತ್ತಿನ ಗಾಡಿ, ಟ್ಯಾಕ್ಟರಗಳಲ್ಲಿ ಬ್ಯಾರಲ್‌ಗಳಲ್ಲಿ ಬಣ್ಣ ತುಂಬಿಕೊಂಡು ಬಣ್ಣವಾಡುವುದನ್ನು ನೋಡಿ ಕಣ್ತುಂಬಿಕೊಳ್ಳುವುದೇ ಜೀವನದ ಒಂದು ಸಾರ್ಥಕ ಭಾವ. ಬಂಡಿ ಬಣ್ಣದಾಟಕ್ಕಾಗಿ ಪೈಪೋಟಿಯೂ ಪ್ರಾರಂಭವಾಗುತ್ತದೆ. ಇಲ್ಲಿನ ಬಣ್ಣದ ಬಂಡಿಗಳ ಯುದ್ಧವನ್ನು  ಆಡುವವರಷ್ಟೇ  ಅಲ್ಲದೆ ನೋಡುಗರಿಗೂ  ಪ್ರೀತಿ. ಮೂರು ಓಣಿಗಳ ಸಾವಿರಾರು ಯುವಕರು 50ಕ್ಕೂ ಹೆಚ್ಚು ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಬ್ಯಾರಲ್ಗಳಲ್ಲಿ ಬಣ್ಣ ತುಂಬಿಕೊಂಡು ಪರಸ್ಪರ ಎರಚಾಟ ನಡೆಸುವುದು ಯಾವ ಮಹಾಯುದ್ಧಕ್ಕೂ ಕಮ್ಮಿಯಲ್ಲ.

ನೂರಾರು ವರ್ಷಗಳಿಂದ ನಗರದಲ್ಲಿರುವ ಈ ಸಂಪ್ರದಾಯದಲ್ಲಿ ಕೆಲ ಸಣ್ಣ ಪುಟ್ಟ
ಬದಲಾವಣೆಗಳಾಗಿವೆ. ಆದರೆ ಯುವಕರಲ್ಲಿ ಉತ್ಸಾಹ, ಸಂಭ್ರಮ ಮಾತ್ರ ಕಡಿಮೆಯಾಗಿಲ್ಲ. ಹಳೆಯ ನಗರದ ಬಹು ಭಾಗ ಆಲಮಟ್ಟಿ  ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಪರಿಣಾಮ ನವನಗರ, ವಿದ್ಯಾಗಿರಿ ಹಾಗೂ ಹಳೆಯ ನಗರಗಳಾಗಿ ಮೂರು ಪ್ರದೇಶಗಳು ವಿಂಗಡಣೆಯಾಗಿವೆ. ಹಳೆಯ ನಗರದಲ್ಲಿನ ಸಾವಿರಾರು ಜನ ನವನಗರದಲ್ಲಿ ನೆಲೆಸಿದ್ದಾರೆ. ಆದರೆ ಹೋಳಿ ಹಬ್ಬಕ್ಕೆ ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುತ್ತಾರೆ. ಮೂರು ದಿನಗಳ ಕಾಲ ಬಾಗಲಕೋಟೆಯ ಜನರು ಬಣ್ಣದ ಸಾಗರದಲ್ಲಿ ಮೈರೆತು ಬಿಡುತ್ತಾರೆ. ಪ್ರತಿ ದಿನ ಮಧ್ಯಾಹ್ನ 03 ಗಂಟೆ ಹೊತ್ತಿಗೆ ಬಣ್ಣದ ಬಂಡಿಗಳ ಆಟಕ್ಕೆ ಕ್ರೀಡಾಂಗಣ ಸಿದ್ಧವಾಗುತ್ತದೆ. ರಸ್ತೆಗಳು, ಗಲ್ಲಿಗಳ ಕಿರಿದಾದ ವೃತ್ತಗಳು, ಮನೆಗಳ ಮಾಳಿಗೆ ಹಾಗೂ ಕಟ್ಟೆಗಳು ಬಣ್ಣದ ಸಂಗ್ರಹಾಗಾರಗಳು. ಬಣ್ಣದ ಬಂಡಿಗಳು ಸಂಚರಿಸುವ ಪ್ರತಿ ರಸ್ತೆಯ ಅಕ್ಕ ಪಕ್ಕ ಬ್ಯಾರಲ್ಗಳಲ್ಲಿ ಬಣ್ಣ ಶೇಖರಿಸಿಟ್ಟಿಕೊಂಡ ಯುವಕರು ಬಂಡಿಗಳಿಗಾಗಿ ಕಾಯ್ದು ಕುಳಿತಿರುತ್ತಾರೆ. ಅತ್ತ ಬಣ್ಣದ ಬಂಡಿಗಳು ಹೊರಟಿವೆ ಎಂಬ ಸುದ್ದಿ ದೊರೆಯುತ್ತಲೆ ಇತ್ತ ಸಮರಕ್ಕಾಗಿ ತಯಾರಿ ಪೂರ್ಣಗೊಳ್ಳುತ್ತದೆ. ಮನೆಗಳ ಮಾಳಿಗೆ, ರಸ್ತೆ ಬದಿ ಹಾಗೂ ಆಯಕಟ್ಟಿನ ಸ್ಥಳದಲ್ಲಿ ರಂಗಿನಾಟ ನೋಡಲು ಸಾವಿರಾರು ಪ್ರೇಕ್ಷಕರು ಸಿದ್ಧರಾಗಿರುತ್ತಾರೆ. ಬಂಡಿಗಳಲ್ಲಿ ನಿಂತಿರುವ ಯುವಕರು ಚೊಂಬು, ದೊಡ್ಡ ತಂಬಿಗೆಗಳಲ್ಲಿ ಬಣ್ಣ ತುಂಬಿಸಿಕೊಂಡು
ಸಿದ್ಧರಾಗುತ್ತಾರೆ. ಓಣಿಯೊಂದರಲ್ಲಿ ಬಂಡಿ ಪ್ರವೇಶಿಸುತ್ತಿದ್ದಂತೆ ನಾಲ್ಕು ದಿಕ್ಕಿನಿಂದ ಅಕ್ಷರಶಃ ಬಣ್ಣಗಳ ಯುದ್ಧ. ಬಣ್ಣದಿಂದ ತಪ್ಪಿಸಿಕೊಂಡು ಎದುರುತ್ತರ ನೀಡುವಷ್ಟರಲ್ಲಿ ಮತ್ತೊಂದು ಸ್ಥಳದಿಂದ ಆಕ್ರಮಣ ನಡೆಯುತ್ತದೆ. ಯುವಕರಷ್ಟೇ ಅಲ್ಲ ಚಿಣ್ಣರೂ ಆಟದಲ್ಲಿ ರಂಗಿನ ಸೇನಾನಿಗಳಾಗಿರುತ್ತಾರೆ. ಪುಟ್ಟ ಪ್ಲ್ಯಾಸ್ಟಿಕ್ ಚೀಲಗಳಲ್ಲಿ ಬಣ್ಣ ತುಂಬಿಸಿಕೊಂಡ ಮಕ್ಕಳು ಬಂಡಿಗಳತ್ತ ಗುರಿಯಿಡುತ್ತಾರೆ. ಕೆಲವು ಚತುರ ಯುವಕರು ಬಂಡಿಯಲ್ಲಿ ಬಣ್ಣದ ಸಂಗ್ರಹ ಮುಗಿಯುವುದನ್ನೇ ಕಾಯುತ್ತಾರೆ. ಬಂಡಿಯವರ ಬಣ್ಣ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಅವಿತಿಟ್ಟ ಬ್ಯಾರಲ್ಗಳಿಂದ ಭರ್ಜರಿ ದಾಳಿ ನಡೆಯುತ್ತದೆ.  ಬಂಡಿಗಳಿಗೆ ಬೇವಿನ ಎಲೆಗಳ ಅಲಂಕಾರವೂ ಇರುತ್ತದೆ. 
  
ಎರಡನೇ ದಿನ ಎಲ್ಲ ಓಣಿಗಳಲ್ಲಿ ಬಂಡಿಗಳು ಹಾಯ್ದು ಬವಿವ ಸಂಘದ ಹತ್ತಿರ ಸೇರುತ್ತಿದ್ದಂತೆ ಮತ್ತೊಮ್ಮೆ ಬಹಿರಂಗ ಎದುರು ಬದುರಿನ ಬಣ್ಣದಾಟ ನಡೆಯುತ್ತದೆ. ಮೂರು ದಿನಗಳ ವೈಭವದ ಬಣ್ಣ ಮುಗಿಯುತ್ತಿದ್ದಂತೆ ವರ್ಷದ ಬಣ್ಣದಾಟಕ್ಕೆ ರಂಗಿನ ತೆರೆ. ಬೇರೆ ಪ್ರದೇಶಗಳಲ್ಲಿ ನೆಲೆಸಿರುವ ಯುವಕರು ಮೂರು ದಿನವೂ ಬಣ್ಣವಾಡುವುದು ಹೋಳಿ ಪ್ರೀತಿಗೆ ಉದಾಹರಣೆ. ಮೂರು ದಿನದ ರಂಗಿನಾಟದಿಂದ ನಗರದ ತುಂಬೆಲ್ಲ ಬಣ್ಣಗಳ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಇತ್ತಿಚಿಗೆ ಇನ್ನು ಉತ್ಸಾಹದಿಂದ ಬಾಗಲಕೋಟೆಯವರು ಬಣ್ಣವನ್ನು ಆಚರಿಸಲು ರೇನ್ ಡಾನ್ಸ್, ಡಿಜೆಗೆ ತಕ್ಕಂತೆ ಹೆಜ್ಜೆ ಹಾಕಲು ಸೌಂಡ್ ವ್ಯವಸ್ಥೆಯೂ ಮಜಭೂತವಾಗಿ ಎಲ್ಲರ ಮೇಲೆ ವೈಭವ ಹೆಚ್ಚಾಗುವ ಪರಿಣಾಮ ಬೀರುತ್ತಿದೆ. 

ಹೋಳಿ ಎಂದರೆ ಹೆಣ್ಮಕ್ಕಳಿಗೂ ಪ್ರೀತಿ :

ಯುವಕರಿಗಿಂತ ನಾವೇನು ಕಡಿಮೆಯಿಲ್ಲ ಎಂಬಂತೆ ನಗರದ  ಸಹೋದರಿಯರು ಹೋಳಿಯ ಆಚರಣೆಯಲ್ಲಿ ತೊಡಗುತ್ತಾರೆ. ಲಿಂಗಬೇದ ಮರೆತು ಹೋಳಿ ಬಣ್ಣದಲ್ಲಿ ಹೆಣ್ಣು ಮಕ್ಕಳು ಬಾಗವಹಿಸುವುದು ಇಲ್ಲಿನ ಮತ್ತೊಂದು ವಿಶೇಷ. ಇತ್ತಿಚಿಗಂತೂ ಅವರು ಹಲಗೆ ವಾದನ ಮಾಡುತ್ತಿರುವುದು ಹೋಳಿ ವೈಭವಕ್ಕೆ ಹೆಣ್ಣು ಮಕ್ಕಳ ಕೊಡುಗೆಯೂ ಸಿಗುತ್ತಿದೆ. ಮನೆಯ ಪ್ರತಿಯೊಬ್ಬ ಹೆಣ್ಣು ಮಕ್ಕಳು ಹೋಳಿ ಬಣ್ಣದ ಬಂಡಿಗಳನ್ನು ನೋಡಲು ಗಂಟೆಗಟ್ಟಲೆ ಕಾದು ಕುಳಿತಿರುತ್ತಾರೆ. ನಗರದ ಕಿಲ್ಲಾದಲ್ಲಿ ಮೊದಲು ಕಾಮದಹನ, ಮೊದಲದಿನ ಬಣ್ಣ, ಮೊದಲನೆ ದಿನ ಸೊಗಿನ ಬಂಡಿ.

ಗತಕಾಲದ ವೈಭವ ಸಾರುವ ಸೋಗಿನ ಬಂಡಿ :

ಬಾಗಲಕೋಟೆಯ ಹೋಳಿಹಬ್ಬದ ಇನ್ನೊಂದು ಆಕರ್ಷಣಿಯವೆಂದರೆ  ಸೋಗಿನ ಬಂಡಿಗಳು. ಐದು ದಿನಗಳ ಕಾಲ ನಡೆಯುವ ಸೋಗಿನ ಬಂಡಿಗಳು ರಾಮಾಯಣ, ಮಹಾಭಾರತ, ಪುರಾತಣ ಕಾಲದ ಪ್ರಸಿದ್ಧ ಮಹಾಪುರುಷರ ವೇಷಭೂಷಣ ಹಾಕಿ ರಾತ್ರಿ ಜಗಮಗಿಸುವ ಬೆಳಕಿನಲ್ಲಿ ಪ್ರದರ್ಶನ ನೋಡುವುದಂತು ತುಂಬಾ ಖುಷಿ. ಅಷ್ಟೆಯಲ್ಲದೆ ಭಾರತದ ಹಿರಿಮೆ-ಗರಿಮೆಗಳನ್ನು , ಶುಭಾಶಯ, ಸಂದೇಶ, ಕೋರಿಕೆಗಳನ್ನು ತಿಳಿಸುವ ಸಂಪ್ರದಾಯವಾಗಿದೆ. ರಾತ್ರಿಯನ್ನದೆ ತಾಯಂದಿರು,ಚಿಕ್ಕಮಕ್ಕಳು ಬೀದಿ ಬೀದಿಗಳಲ್ಲಿ ಕಿಕ್ಕಿರಿದು ನೋಡುವುದು ಸಂಸ್ಕೃತಿಯ ಪ್ರತಿಕವಾಗಿದೆ.

ಕೆಲವೊಂದಿಷ್ಟು ಲೋಪದೋಷಗಳನ್ನು ಸರಿಪಡಿಸಿ ಹೋಳಿ ಆಚರಣೆಯಲ್ಲಿ ತೊಡಗಿದರೆ ದೇಶದಲ್ಲಿಯೇ ಪ್ರಥಮ ಸ್ಥಾನ ದಕ್ಕಿಸಿಕೊಳ್ಳುವುದು ಕಷ್ಟವೆನಲ್ಲ. ಮುಳುಗಡೆಯ ಬಾಗಲಕೋಟೆಯಲ್ಲಿ ಯಾವ ಹಬ್ಬದಾಚರಣೆಗಳೂ ಮುಳುಗಿ ಹೋಗದಂತೆ ಹಿಂದಿನ ವೈಭವವನ್ನು ಕಾಯ್ದುಕೊಂಡು ಬರುವಲ್ಲಿ ಇಲ್ಲಿನ ಹಿರಿಯರ ಮತ್ತು ಯುವ ಸಮುದಾಯದವರ ಪಾತ್ರ ದೊಡ್ಡದು. ಪ್ರತಿಯೊಂದು ಬಡಾವಣೆಗಳಲ್ಲೂ ಗೆಳೆಯರ ಬಳಗ ಕಟ್ಟಿಕೊಂಡು ಬಾಗಲಕೋಟೆ ಹೋಳಿ ಆಚರಣೆಯ ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಕೀರ್ತಿ ಇಲ್ಲಿ ಮುಳುಗಡೆಯೊತ್ತರ ಬಾಗಲಕೋಟೆಯ ಸಮಸ್ತ ಜನತೆಗೆ ಸಲ್ಲುತ್ತದೆ. ಒಟ್ಟಾರೆ ಬಡವ, ಶ್ರೀಮಂತವೆನ್ನದೇ ಜಾತಿ,ಮತ,ಪಂಥಗಳನ್ನು ಮರೆತು ಮೇಲು ಕೀಳು ಎಂಬ ಮತೀಯ ಭಾವನೆಗಳನ್ನು ತೊರೆದು ಆಚರಿಸುವ ಭಾವೈಕ್ಯದ ಸಂಕೇತವಾದ ಹೋಳಿ ಹಬ್ಬವು ನಮ್ಮ ಸಂಸ್ಕೃತಿಯ, ಸಾಮರಸ್ಯದ ಪ್ರತೀಕವಾಗಿದೆ. ವಿಚಿತ್ರವೆಂದರೆ ಮೂರುದಿನದ ಬಣ್ಣದಾಟದಲ್ಲಿ ಇಡೀ ಊರು ಸ್ವಯಂಪ್ರೇರಿತವಾಗಿ ಬಂದ ಆಗುತ್ತದೆ. ಇದರಲ್ಲಿಯೂ ಕೋಮು ಸೌಹಾರ್ಧತೆ ಎದ್ದು ಕಾಣುತ್ತದೆ. ಈ ಸಾಮಾಜಿಕ ಸಾಮರಸ್ಯದ ಹಬ್ಬವು ರಾಷ್ಟ್ರಮಟ್ಟದಲ್ಲಿ ಕೀರ್ತಿ ಪಡೆಯಬೇಕೆಂಬ ನನ್ನಂತಹ ಸಾವಿರಾರು ಜನತೆಯ ಒಕ್ಕೂರಲಿನ ಕೂಗು ಇದಾಗಿದೆ.

ಇನ್ನೇನು ಬಾಗಲಕೋಟೆ ಹೋಳಿಯ ವೈಭವ ಮುಗದೇ ಹೋಯಿತು ಎನ್ನುವ ಸಂದರ್ಭದಲ್ಲಿ ಬಾಗಲಕೋಟೆಯ ಮಹಾನ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಮತ್ತೇ ವೈಭವದೊಂದಿಗೆ ಚಿಮ್ಮಲು ಕಾರಣೀಭೂತರಾದವರಲ್ಲಿ ದಿ.ಜ್ಯೋತಿ ಪ್ರಕಾಶ ಸಾಳುಂಕೆ, ದಿ. ಶಂಕರ ಮೇಲ್ನಾಡ ಸರ್, ದಿ. ಮೋನಪ್ಪ ತಪಶೆಟ್ಟಿ, , ದಿ. ಮಲ್ಲೆಶಪ್ಪ ಜಿಗಜಿನ್ನಿ, ಆರಬ್ಬಿ ಮಲ್ಲಪ್ಪ  ಇನ್ನೂ ಹಲವಾರು ಮಹನೀಯರು. ಸದ್ಯ ಬಾಗಲಕೋಟ ಹೋಳಿ ಆಚರಣಾ ಸಮಿತಿಯ ಅದ್ಯಕ್ಷರಾದ ಕಳಕಪ್ಪ ಬಾದೋಡಗಿ ಅವರ ನೇತೃತ್ವದಲ್ಲಿ ವೈಭವಯುತ, ಹಾಗೂ ಪರಂಪರಾಗತ ಹೋಳಿ ಆಚರಣೆ ನಡೆಯುತ್ತಿದೆ.

    ರಾಜ್ಯ ಸರ್ಕಾರ ದಸರಾ ಉತ್ಸವ, ರನ್ನ ಉತ್ಸವ, ಚಾಲುಕ್ಯ ಉತ್ಸವ ತರಹ ಬಾಗಲಕೋಟೆ ಹೋಳಿ ಉತ್ಸವವನ್ನು  ಸರ್ಕಾರದಿಂದ ಆಚರಿಸಲು ಇಲ್ಲಿನ ಹಿರಿಯರು ಯುವಕರು ತುಂಬಾ ಪ್ರಯತ್ನಿಸುತ್ತಿದ್ದಾರೆ. ಆದಷ್ಟು ಬೇಗನೆ ಸರ್ಕಾರ ಆಚರಿಸಲು ಅನುವು ಮಾಡಿಕೊಡಬೇಕು. ಸರ್ಕಾರ ಅಷ್ಟೇಯಲ್ಲ ಇನ್ನು ಹೆಚ್ಚು  ಸಾಂಸ್ಕೃತಿಕವಾಗಿ ಸೋಬಗನ್ನು ಹೆಚ್ಚಿಸುವ ಕರ್ತವ್ಯ ಸರ್ಕಾರ ಮತ್ತು
ಬಾಗಲಕೋಟೆಯ ಜನರ ಮೇಲಿದೆ.

ಬರಹ: ಸುರೇಶ ಮಾಗಿ, ಬಾಗಲಕೋಟೆ

0/Post a Comment/Comments