ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದು ಸಿದ್ದರಾಮಯ್ಯ ಸರ್ಕಾರ ಎಂಬುದನ್ನು ಕ್ಷೇತ್ರದ ಜನತೆ ಮರೆಯಬಾರದು

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಕ್ಷೇತ್ರಕ್ಕೆ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದು ಅಂದಿನ ಸಿದ್ದರಾಮಯ್ಯ ಸರ್ಕಾರ ಎಂಬುದನ್ನು ಕ್ಷೇತ್ರದ ಜನತೆ ಎಂದಿಗೂ ಮರೆಯಬಾರದು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಸೋಮವಾರ ಯುವ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಂಗಭದ್ರಾ ಮತ್ತು ಕೃಷ್ಣಾನದಿಯಿಂದ ಕೆರೆ ತುಂಬಿಸುವ ಯೋಜನೆ ಮಾಡಿದ್ದೇ ಹಿಂದಿನ ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರ ಹೊರತು ಸಚಿವ ಹಾಲಪ್ಪ ಆಚಾರ್ ಮಾಡಿದ್ದಲ್ಲ. ಇದರಲ್ಲಿ ಅವರ ಪಾತ್ರ ಏನೂ ಇಲ್ಲ. ಈ ಯೋಜನೆ ನಾನೇ ಮಾಡಿದ್ದು ಎಂದು ಸಚಿವರು ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಹಿಂದಿನ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಶ್ರಮ ವಹಿಸಿ ಯಲಬುರ್ಗಾ ತಾಲೂಕಿನ ಕೆರೆಗಳಿಗೆ ಕೆರೆ ತುಂಬಿಸುವ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆಗೆ ಆರ್ಥಿಕ ಅನುಮೋದನೆ, ಟೆಂಡರ್, ಅನುದಾನ ಮಂಜೂರು ಮಾಡಲಾಗಿದೆ. ಹೀಗಾಗಿ ಕ್ಷೇತ್ರದ ಕೆರೆಗಳಿಗೆ ಕೃಷ್ಣಾ ನದಿ ನೀರು ಹರಿಯುತ್ತಿದೆ. ಈ ಕೆಲಸ ನಾನು ಮಾಡಿದ್ದೇನೆ ಎಂದು ಸುಮ್ಮನೆ ವೋಟಿನ ರಾಜಕಣಕ್ಕಾಗಿ ಕ್ಷೇತ್ರದ ಹಾಲಿ ಸಚಿವರು ಜನರಿಗೆ ಹೇಳುತ್ತಿರುವುದು ಸರಿಯಲ್ಲ ಎಂದರು.
ಬಿಸ್ಕೀಂ ಯೋಜನೆ ಅಂತರ್ ರಾಜ್ಯಗಳ ನದಿಜಲ ವಿವಾದ ಹಿನ್ನೆಲೆಯಲ್ಲಿ ಕಳೆದ ೧೦ ವರ್ಷದಿಂದ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ಇರುವುದರಿಂದ ಯೋಜನೆ ವಿಳಂಬವಾಗಿದೆ. ನಾಲ್ಕು ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆದು ಜಲವಿವಾದ ರಾಜಿಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಪಡಿಸುವಲ್ಲಿ ಪ್ರಧಾನಿ ಮೋದಿಯವರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ವಿವಾದ ಮುಂದುವರೆದಿದೆ ಎಂದರು.
ನಾನು ಸಚಿವನಾಗಿದ್ದ ವೇಳೆ ನಮ್ಮ ಪಾಲಿಗೆ ಬಂದಿರುವ ನೀರನ್ನು ಕೆರೆಗಳಿಗೆ ತುಂಬಿಸುವ ಉದ್ದೇಶದಿಂದ ಒತ್ತಡ ಹಾಕಿದ್ದರ ಕಾರಣ ಸಿದ್ದರಾಮಯ್ಯ ಸರ್ಕಾರದಲ್ಲಿ ೭೬ ಕೆರೆಗಳಿಗೆ ಕೆರೆ ತುಂಬಿಸುವ ಯೋಜನೆ ಜಾರಿಗೆ ತಂದಿದ್ದರು. ಇದರಿಂದ ತಾಲೂಕಿನ ೨೨ ಕೆರೆಗಳಿಗೆ ಕೃಷ್ಣಾ ನದಿ ನೀರು ಬರುತ್ತಿರುವುದು ನಾವು ಮಾಡುವ ಶ್ರಮದಿಂದ ಎನ್ನುವುದನ್ನು ಕ್ಷೇತ್ರದ ಮತದಾರರಿಗೆ ತಿಳಿಸುತ್ತಿದ್ದೇವೆ. ಬಿಜೆಪಿ ಸರ್ಕಾರ, ಕ್ಷೇತ್ರದ ಹಾಲಿ  ಸಚಿವರು ಇದಕ್ಕೆ ಕೊಡುಗೆ ಏನು ಇಲ್ಲ. ನಾವು ಮಾಡಿದ ಕೆಲಸವನ್ನು ಈ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು.
--
ಬೆಳಗ್ಗೆ ತಳಕಲ್‌ನಿಂದ ಆರಂಭಗೊಂಡ ಬೈಕ್ ರ್ಯಾಲಿ ವಿವಿಧ ಗ್ರಾಮಗಳ ಮೂಲಕ ಹಗೇದಾಳ ಜಾಕ್ವೆಲ್‌ಗೆ ತಲುಪಿತು. ಸುಮಾರು ೩೧ ಗ್ರಾಮಗಳಿಗೆ ೧೮೦ ಕಿ.ಮೀ. ರ್ಯಾಲಿ ಮೂಲಕ ಸಂಚರಿಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಸಾವಿರಾರು ಸಂಖ್ಯೆಯ ಬೈಕ್ ರ್ಯಾಲಿಗೆ ವ್ಯಾಪಕ ಸ್ಪಂದನ ದೊರೆತಿದ್ದು, ತೆರೆದ ವಾಹನದಲ್ಲಿ ರಾಯರಡ್ಡಿ ಜನರತ್ತ ಕೈಬೀಸಿದರು.
ಕುಕನೂರಿನ ತಳಕಲ್‌ನಿಂದ, ಯಲಬುರ್ಗಾದ ಸಂಗನಾಳ ಮಾರ್ಗವಾಗಿ ಬೇವೂರು, ಹಿರೇವಂಕಲಕುಂಟಾ, ವಜ್ರಬಂಡಿ, ಹಗೇದಾಳ ಬಸಾಪೂರು ಬಳಿಕ ಯಲಬುರ್ಗಾ ಪಟ್ಟಣಕ್ಕೆ ಆಗಮಿಸಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮುಖಂಡರಾದ ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಎ.ಜಿ.ಭಾವಿಮನಿ, ಹನುಮಂತಗೌಡ ಚಂಡೂರು, ರಾಘವೇಂದ್ರ ಜೋಶಿ, ಅಂದಾನಗೌಡ ಪಾಟೀಲ್, ಸಾವಿತ್ರಿ ಗೊಲ್ಲರ್, ರೇವಣಪ್ಪ ಸಂಗಟಿ, ಜಯಶ್ರೀ ಅರಕೇರಿ, ನಂದಿತಾ ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಸುಧೀರ್ ಕೊರ್ಲಹಳ್ಳಿ, ಮಲ್ಲು ಜಕ್ಕಲಿ ಸೇರಿದಂತೆ ಇತರರಿದ್ದರು.
-----

0/Post a Comment/Comments