ಪರಿಣಾಮಕಾರಿ ಅನುಷ್ಠಾನಕ್ಕೆ ಅಡುಗೆ ಸಿಬ್ಬಂದಿ‌ ಶ್ರಮಿಸಿ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಅಕ್ಷರ ದಾಸೋಹ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನದಲ್ಲಿ ಅಡುಗೆ ಸಿಬ್ಬಂದಿ ಪಾತ್ರ ಮಹತ್ವದ್ದಾಗಿದೆ ಎಂದು ಅಕ್ಷರ ದಾಸೋಹ ತಾಲೂಕು ಸಹಾಯಕ ನಿರ್ದೇಶಕ ಎಫ್.ಎಂ.ಕಳ್ಳಿ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಿರೇವಂಕಲಕುಂಟಾ ವಲಯ ಮಟ್ಟದ ಅಡುಗೆ ಸಿಬ್ಬಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಡುಗೆದಾರರಿಗೆ ಕೆಲಸದಲ್ಲಿ ಪುನಶ್ಚೇತನ ನೀಡುವ ಸಲುವಾಗಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಸ್ವಚ್ಛತೆಯಿಂದ ಕಡ್ಡಾಯವಾಗಿ ಏಪ್ರಾನ್ ಧರಿಸಿ ಶುದ್ಧ ಮತ್ತು ಸುರಕ್ಷಿತವಾದ ಆಹಾರ ತಯಾರಿಸಿ ಮಕ್ಕಳಿಗೆ ವಿತರಿಸಬೇಕು ಎಂದರು.
ಉಪಪ್ರಾಚಾರ್ಯ ಚಂದ್ರಕಾಂತಯ್ಯ ಕಲ್ಯಾಣಮಠ ಮಾತನಾಡಿ, ಅಡುಗೆ ಸಿಬ್ಬಂದಿ ತರಬೇತಿಯ ಸದುಪಯೋಗ ಪಡಿಸಿಕೊಂಡು ಶಾಲೆಗಳಲ್ಲಿ ಉತ್ತಮ ಕೆಲಸ ನಿರ್ವಹಿಸಬೇಕು ಎಂದರು.
ಕುಷ್ಟಗಿ ಅಗ್ನಿಶಾಮಕ ಠಾಣಾಧಿಕಾರಿ ಸುರೇಶ್, ಶಿವಾಜಿರಾವ್ ಅವರು
ಅಡುಗೆ ತಯಾರಿಸುವ ಸಂದರ್ಭ ಉಂಟಾಗಬಹುದಾದ ಅಗ್ನಿ ಅವಘಡಗಳಿಂದ ಹೇಗೆ ಪಾರಾಗಬೇಕು, ಅಗ್ನಿ ನಂದಕಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ವಿವರವಾದ ಮಾಹಿತಿ ನೀಡಿದರು. ಅಗ್ನಿ ಅನಾಹುತದಿಂದ ಪಾರಾಗುವ ಮತ್ತು ನಂದಿಸುವಿ ಉಪಾಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಕಾರ್ಯಾಗಾರದಲ್ಲಿ ವಿಶೇಷವಾಗಿ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ಅಡುಗೆ ತಯಾರಿಕೆ ಸ್ಪರ್ಧೆ ಏರ್ಪಡಿಸಿತ್ತು.
ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ 10 ಶಾಲೆಗಳ ಅಡುಗೆ ಸಿಬ್ಬಂದಿ ಭಾಗವಹಿಸಿ ಬಿಸಿಯೂಟದ ಮೆನು ಪ್ರಕಾರ ತಯಾರಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಸಮುದಾಯ ಆರೋಗ್ಯ ಅಧಿಕಾರಿ ರೆಡ್ಡಿ ನಾಯಕ, ಕೆಎಂಎಫ್ ನೋಡಲ್ ಅಧಿಕಾರಿ ಬಸವರಾಜ, ಅಪೂರ್ವ ಭಾರತ ಗ್ಯಾಸ್ ಏಜೆನ್ಸಿಯ ಶಿವಕುಮಾರ್ ಪಟ್ಟಣಶೆಟ್ಟಿ, ಮುಖ್ಯಶಿಕ್ಷಕ ಸುರೇಶ, ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯದರ್ಶಿ ಶಿವನಗೌಡ ಪಾಟೀಲ್, ಪೀರ್‌ಸಾಬ್ ನದಾಫ್, ಸೇರಿದಂತೆ ಇತರರಿದ್ದರು.

0/Post a Comment/Comments