ಖೇಲೋ ಇಂಡಿಯಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಹುಲಿಗೆಮ್ಮ ಅಪೂರ್ವ ಸಾಧನೆ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಜ.೨೭ ರಿಂದ ಫೆ.೩ರ ವರೆಗೆ ನಡೆದ ರಾಷ್ಟ್ರೀಯ ಅಂಡರ್-೧೯ ಖೇಲೋ ಇಂಡಿಯಾ ವಾಲಿಬಾಲ್ ಯೂತ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸುವ ಮೂಲಕ ತಾಲೂಕಿನ ವಜ್ರಬಂಡಿ ಗ್ರಾಮದ ೧೬ ವರ್ಷದ ಹುಲಿಗೆಮ್ಮ ಭೋವಿ ಇತರ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ.
ಪ್ರತಿಭೆಗೆ ತಕ್ಕ ಪ್ರೋತ್ಸಾಹ, ಸಾಧಿಸುವ ಛಲವೊಂದಿದ್ದರೆ ಯಾವುದೇ ಕ್ಷೇತ್ರದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂಬುದಕ್ಕೆ ಹುಲಿಗೆಮ್ಮ ಉತ್ತಮ ಉದಾಹರಣೆ.
ಕಡು ಬಡತನ ಕುಟುಂಬದಲ್ಲಿ ಜನಿಸಿದ ಹುಲಿಗೆಮ್ಮ ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದ ಈಗೆಕೆ ಅಣ್ಣ ಯಮನೂರಪ್ಪನೇ ಸ್ಪೂರ್ತಿ. ಮೂಡಬಿದರೆಯ ಆಳ್ವಾಸ್ ಸಂಸ್ಥೆಯಲ್ಲಿದ್ದ ಯಮನೂರಪ್ಪ ಅಥ್ಲೆಟಿಕ್ ಮತ್ತು ವಾಲಿಬಾಲ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಅನನ್ಯ ಸಾಧನೆ ಮಾಡಿದ್ದಾನೆ. ೨೦೧೫ರಲ್ಲಿ ನಡೆದ ಅಂಡರ್-೧೪ ಮತ್ತು ಅಂಡರ್-೧೭ ವಯೋಮಿತಿಯ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾರತ-ಶ್ರೀಲಂಕಾ ದ್ವಿರಾಷ್ಟ್ರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿ ತಂಗಿಗೆ ಸ್ಪೂರ್ತಿಯಾಗಿದ್ದಾರೆ. ತಂದೆಯ ಅಕಾಲಿಕ ಮರಣದಿಂದ ಮನೆಯ ಜವಾಬ್ದಾರಿ, ಆರ್ಥಿಕ ಪರಿಸ್ಥಿತಿ ಕಾರಣದಿಂದ ಕ್ರೀಡೆಯಿಂದ ಯಮನೂರಪ್ಪ ವಿಮುಖವಾಗಿ ತಂಗಿಯ ಕನಸು ನನಸಾಗಿಸಲು ಬೆನ್ನೆಲುಬಾಗಿ ನಿಂತಿರುವುದು ನಿಜಕ್ಕೂ ಕ್ರೀಡಾಸ್ಪೂರ್ತಿ ಎನ್ನಬಹುದು.
--
ಶಿಕ್ಷಣ: ವಜ್ರಬಂಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಕೊಪ್ಪಳದ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆಯುತ್ತಿರುವ ಹುಲಿಗೆಮ್ಮ ಈ ಸಲ ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಕೊಪ್ಪಳದ ಕ್ರೀಡಾ ನಿಲಯದಲ್ಲಿ ವಾಲಿಬಾಲ್ ತರಬೇತಿ ಪಡೆಯುತ್ತಿದ್ದಾಳೆ. ಹುಲಿಗೆಮ್ಮಳಿಗೆ ಅಣ್ಣನಿಂದ ಹೆಚ್ಚಿನ ರೀತಿಯಲ್ಲಿ ತರಬೇತಿ ಸಿಗುತ್ತಿದೆ.
-- 
ವಾಲಿಬಾಲ್ ಪಂದ್ಯಾವಳಿಯಲ್ಲಿ ಇದೂವರೆಗೂ ೩ ಬಾರಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾಳೆ. ಕಳೆದ ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಅಂಡರ್-೧೬ ಫೆಡರೇಶನ್ ಕಪ್‌ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕಿಯಾಗಿ ಪ್ರತಿನಿಧಿಸಿದ್ದರು. ೨೦೨೦ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಓಲಂಪಿಕ್‌ನಲ್ಲಿ ತಂಡ ತೃತೀಯ ಸ್ಥಾನ ಪಡೆದಿದೆ. ೨೦೨೨ರಲ್ಲಿ ದೆಹಲಿಯಲ್ಲಿ ನಡೆದ ಖೇಲೋ ಇಂಡಿಯಾ ವಾಲಿಬಾಲ್ ಲೀಗ್ ಪಂದ್ಯಾವಳಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಇನ್ನಷ್ಟು ಅವಕಾಶಗಳು ಸಿಕ್ಕರೆ ಭಾರತ ತಂಡವನ್ನು ಪ್ರತಿನಿಧಿಸುವ ಮಹತ್ವದ ಕನಸು ನನಸಾಗಿಸಿಕೊಳ್ಳುವ ದಿನಗಳು ದೂರವಿಲ್ಲ. ಈಕೆಯ ಸಾಧನೆಗೆ ಜಿಲ್ಲೆ, ತಾಲೂಕಿನಲ್ಲಿ ಅನೇಕರು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
--
ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎನ್ನುವುದು ಬಾಲ್ಯದ ಕನಸಾಗಿತ್ತು. ದೇಶದ ಬೇರೆ ಬೇರೆ ರಾಜ್ಯದಲ್ಲಿ ನಡೆದ ವಾಲಿಬಾಲ್ ಲೀಗ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿರುವುದು ಸಂತಸ ತಂದಿದೆ. ಇದಕ್ಕೆಲ್ಲ ನನ್ನ ಅಣ್ಣನೇ ಸ್ಪೂರ್ತಿ. ಭಾರತ ತಂಡವನ್ನು ಪ್ರತಿನಿಧಿಸುವುದು ನನ್ನ ಮುಂದಿನ ಕನಸು.
-ಹುಲಿಗೆಮ್ಮ ಭೋವಿ, ರಾಷ್ಟ್ರೀಯ ಅಂಡರ್-೧೯ ಖೇಲೋ ಇಂಡಿಯಾ ವಾಲಿಬಾಲ್ ಯೂತ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಜ್ರಬಂಡಿ ಗ್ರಾಮದ ಪ್ರತಿಭೆ.
--
ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾನ್ವಿತ ಕ್ರೀಡಾಪಟು ಆಗಿರುವ ಹುಲಿಗೆಮ್ಮನಿಗೆ ಉತ್ತಮ ತರಬೇತಿ ಮತ್ತು ಪ್ರೋತ್ಸಾಹ ಸಿಕ್ಕರೆ ಖಂಡಿತವಾಗಿಯೂ ಭಾರತೀಯ ತಂಡವನ್ನು ಪ್ರತಿನಿಧಿಸುವಳು.
-ಅನಿಲ್‌ಕುಮಾರ್ ಸೂರ್ಯವಂಶಿ, ರಾಷ್ಟ್ರೀಯ ಕ್ರೀಡಾಪಟು, ಬೀದರ್.

0/Post a Comment/Comments