ಪ್ರಗತಿವಾಣಿ, ಕೊಪ್ಪಳ
ಯಲಬುರ್ಗಾ: ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ಹೀಗಾಗಿ ಅವರೇ ಸ್ವಚ್ಛ ಭಾರತದ ರಾಯಬಾರಿಗಳು ಎಂದು ಜಿಪಂ ಸಿಇಒ ಫೌಜಿಯಾ ತರನ್ನುಮ್ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಜಿಪಂ, ತಾಪಂ, ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಲುಮೆ-೨ ಅಭಿಯಾನದ ಸ್ವಚ್ಛ ಶುಕ್ರವಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ವಚ್ಛತೆಯ ಪಾಠ ಅಳವಡಿಸಿಕೊಂಡು ಮನೆಯವರಿಗೂ ಅರಿವು ಮೂಡಿಸಬೇಕು. ಈ ರೀತಿ ಆದಾಗ ಮಾತ್ರ ಗಾಂಧೀಜಿ ಕಂಡ ಸ್ವಚ್ಛ ಭಾರತ ಕನಸು ನನಸಾಗಲು ಸಾಧ್ಯ. ಪ್ರತಿ ಶುಕ್ರವಾರಕ್ಕೊಮ್ಮೆ ಹಳ್ಳಿಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಜಿಲ್ಲೆಯಲ್ಲಿರುವ ಎಲ್ಲ ಗ್ರಾಮಗಳ ಸ್ವಚ್ಛತೆ ಮಾಡುವುದು ಚಿಲುಮೆ ಅಭಿಯಾನದ ಉದ್ದೇಶ. ಅದಕ್ಕೆ ಗ್ರಾಮಸ್ಥರು, ಸಾರ್ವಜನಿಕರು, ಮಕ್ಕಳು, ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಸರ್ಕಾರದ ಜತೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಎಲ್ಲರೂ ಶ್ರಮದಾನ ಮಾಡುವ ಮೂಲಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ವಿದ್ಯಾರ್ಥಿನಿಯರು ವೈಯಕ್ತಿಕ ಸ್ವಚ್ಛತೆ ಜತೆಗೆ ತಾವು ಬಳಸುವ ವಸ್ತುಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಅಲ್ಲದೇ ಹಸಿ, ಒಣ ಕಸ ಬೇರ್ಪಡಿಸುವ ವಿಧಾನ ಅದರಿಂದ ಗೊಬ್ಬರ ತಯಾರಿಸುವುದು ಹಾಗೂ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡುವಂತೆ ವಿದ್ಯಾರ್ಥಿಗಳೊಂದಿಗೆ ಸಿಇಒ ಸಂವಾದ ನಡೆಸಿ, ಬಳಿಕ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಮಕ್ಕಳ ಕಲಿಕಾ ಗುಣಮಟ್ಟ ಪರಿಶೀಲಿಸಿದರು. ಮಕ್ಕಳಿಂದ ಹಾಡು, ಮಗ್ಗಿ ಹೇಳಿಸಿ ಖುಷಿ ಪಟ್ಟರು.
--
ನರೇಗಾದಡಿ ಅಡುಗೆ ಕೊಠಡಿಗೆ ಮೆಚ್ಚುಗೆ:
ನರೇಗಾದಡಿ ನಿರ್ಮಾಣಗೊಂಡಿರುವ ಚಿಕ್ಕಮ್ಯಾಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಕೊಠಡಿ, ಶಾಲಾ ತಡೆಗೋಡೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿದ್ದ ಅಡುಗೆ ತಯಾರಿಸುವವರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಗುಣಮಟ್ಟದ ಶಾಲಾಭಿವೃದ್ಧಿ ಕಾಮಗಾರಿ ಆಗಬೇಕೆಂದು ಸಲಹೆ ನೀಡಿದರು.
ಬಳಿಕ ವಿದ್ಯಾರ್ಥಿಗಳ ಜತೆ ಬಿಸಿಯೂಟ ಸವಿದರು.
ಈ ಸಂದರ್ಭ ತಾಪಂ ಇಒ ಸಂತೋಷ ಪಾಟೀಲ್, ಸಹಾಯಕ ನಿರ್ದೇಶಕರಾದ ಎಫ್.ಡಿ.ಕಟ್ಟಿಮನಿ, ಗೀತಾ ಅಯ್ಯಪ್ಪ, ಸಿಡಿಪಿಒ ಸಿಂಧು ಅಂಗಡಿ, ಗ್ರಾಪಂ ಅಧ್ಯಕ್ಷೆ ಕೆಂಚಮ್ಮ ರಾಮಣ್ಣ ಹಿರೇಮನಿ, ಉಪಾಧ್ಯಕ್ಷ ಶರಣಪ್ಪ ಕುರಿ, ಸದಸ್ಯರಾದ ದ್ಯಾಮಣ್ಣ, ಶರಣಕುಮಾರ ಅಮರಗಟ್ಟಿ, ಶರಣಪ್ಪ ಹಾದಿಮನಿ, ಶರಣಪ್ಪ ಕರಡದ, ಉಮೇಶ ವಡ್ಡರ, ಶರಣಯ್ಯ ಬಂಡಿಹಾಳ, ಪಿಡಿಒ ವೆಂಕಟೇಶ ನಾಯಕ, ಜಿಪಂ ಎಸ್‌ಬಿಎಂ ಸಂಯೋಜಕ ಮಾರುತಿ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಸೇರಿದಂತೆ ಇತರರಿದ್ದರು.
Post a Comment