ಪ್ರಗತಿ ವಾಣಿ, ಕೊಪ್ಪಳ
ಯಲಬುರ್ಗಾ:ಶಂಕಿತ ಡೆಂಗ್ಯು, ಚಳಿಜ್ವರದಿಂದ ಜನ ಬಳಲುತ್ತಿರುವ ತಾಲೂಕಿನ ಮಂಡಲಮರಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಹಾಗೂ ತಾಪಂ, ಗ್ರಾಪಂ ಅಧಿಕಾರಿಗಳ ತಂಡ ಗುರುವಾರ ಅನಾರೋಗ್ಯದಿಂದ ಬಳಲುತ್ತಿರುವ ನಿವಾಸಿಗಳ ಮೆನೆಗೆ ಭೇಟಿ ನೀಡಿ ಮಾಹಿತಿ ಪಡೆಯಿತು.
ಟಿಎಚ್‌ಒ ಸುಮಾ ಪಾಟೀಲ್ ಮಾತನಾಡಿ, ಗ್ರಾಮದಲ್ಲಿ ಮೂವರಲ್ಲಿ ಶಂಕಿತ ಡೆಂಗ್ಯು ಇರುವ ಕುರಿತು ಖಾಸಗಿ ವರದಿ ಬಂದಿದೆ. ಅಲ್ಲದೇ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪ್ರಮುಖವಾಗಿ ಗ್ರಾಮದಲ್ಲಿ ಅಸ್ವಚ್ಛತೆ ಕಾರಣವಾಗಿದೆ. ಸ್ವಚ್ಛ ವಾತಾವರಣ ಇದ್ದರೆ, ರೋಗ ನಿಯಂತ್ರಣ ಸಾಧ್ಯ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಾಗಿದ್ದು, ರಕ್ತದ ಮಾದರಿ ಸಂಗ್ರಹಿಸಿ ಜಿಲ್ಲಾಸ್ಪತ್ರೆಗೆ ವರದಿ ಸಲ್ಲಿಸಲಾವುದು ಎಂದರು.
--
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕೆ.ವೆಂಕಟೇಶ ಮಾತನಾಡಿ, ಗ್ರಾಮದ ನಾನಾ ಕಡೆ ಸ್ವಚ್ಛತೆ ಇಲ್ಲದಿರುವುದು, ಸಂಗ್ರಹವಾದ ಕಲುಷಿತ ನೀರಿನಿಂದಾಗಿ ಸೊಳ್ಳೆಗಳ ಉತ್ಪತ್ತಿ ಕಾರಣದಿಂದ ಜನರಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದೆ. ಆಶಾ ಕಾರ್ಯಕರ್ತೆಯರು ನಿವಾಸಿಗಳ ಮನೆಯಲ್ಲಿ ಎರಡ್ಮೂರು ದಿನಗಳಿಂದ ಸಂಗ್ರಹಿಸಿದ ನೀರನ್ನು ಖಾಲಿ ಮಾಡಿಸಬೇಕು. ಕಡ್ಡಾಯವಾಗಿ ಲಾರ್ವಾ ಸಮೀಕ್ಷೆ ನಡೆಸಬೇಕು. ಗ್ರಾಪಂನವರು ಸ್ವಚ್ಛತೆ, ಫಾಗಿಂಗ್ ಮಾಡಿಸಬೇಕು. ಸಾವರ್ಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
--
ತಾಪಂ ಇಒ ಸಂತೋಷ ಪಾಟೀಲ್ ಮಾತನಾಡಿ, ಗ್ರಾಪಂನಿಂದ ಕೂಡಲೇ ಫಾಗಿಂಗ್ ಮಾಡಿಸಿ, ನೈರ್ಮಲ್ಯ ಕಾಪಾಡಬೇಕು. ನೀರಿನ ತೊಟ್ಟಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪಿಡಿಒ ಅಬ್ದುಲ್ ಗಫರ್‌ಗೆ ಸೂಚಿಸಿದರು.
--
ನಿವಾಸಿಗಳ ಆರೋಪ: ಗ್ರಾಮದಲ್ಲಿ ಜನರು ಜ್ವರದಿಂದ ಬಳಲುತ್ತಿದ್ದಾರೆ. ನಾನಾ ಓಣಿಗಳಲ್ಲಿ ಸ್ವಚ್ಛತೆ ಇಲ್ಲ. ಜೆಜೆಎಂ ಮತ್ತು ಕೊಳವೆ ಬಾವಿಯಿಂದ ನೀರು ಪೂರೈಕೆಯಾಗುತ್ತಿದ್ದು, ಅನಾರೋಗ್ಯಕ್ಕೆ ಕಾರಣವಾಗಿದೆ. ಹೀಗಾಗಿ ಜನರು ಆಸ್ಪತ್ರೆ ಸೇರುವಂತಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಆಲಿಸಿಲ್ಲ ಎಂದು ಆರೋಪಿಸಿದರು.
--
ಬುಟ್ಟಿ, ಡಬ್ಬಿ, ಬ್ಯಾರಲ್ ಹಾಗೂ ಡೋಣಿಯಲ್ಲಿ ಮೂರ್ನಾಲ್ಕು ದಿನಗಳಿಂದ ತುಂಬಿಸಿಟ್ಟಿದ್ದ ನೀರನ್ನು ಅಧಿಕಾರಿಗಳು ನಿವಾಸಿಗಳ ಮೆನೆಗೆ ಭೇಟಿ ನೀಡಿ ಖಾಲಿ ಮಾಡಿಸುತ್ತಿರುವುದು ಕಂಡು ಬಂದಿತು. ಶಿಬಿರದಲ್ಲಿ ಬಹುತೇಕರು ಆರೋಗ್ಯ ತಪಾಸಣೆಗೆ ಒಳಗಾದರು. ಜ್ವರದಿಂದ ಬಳಲುತ್ತಿರುವವ ರಕ್ತದ ಮಾದರಿ ಸಂಗ್ರಹಿಸಲಾಯಿತು.
--
ಈ ಸಂದರ್ಭ ಗ್ರಾಪಂ ಸದಸ್ಯ ಸೋಮಲಿಂಗಪ್ಒ ಕುರಿ, ವೈದ್ಯಾಧಿಕಾರಿ ನೇತ್ರಾವತಿ ಹಿರೇಮಠ, ರೋಗವಾಹಕ ಆಶ್ರಿತ ರೋಗಗಳ ಮೇಲ್ವಿಚಾರ ಇಮ್ತಿಯಾಜ್ ನೇವಾರ್, ವೈದ್ಯ ಶ್ರೀಮಂತ ಗುತ್ತೇದಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹಾದಯ್ಯ ಹಿರೇಮಠ, ಪಿಡಿಒ ಅಬ್ದುಲ್ ಗಫರ್, ಪ್ರಮುಖರಾದ
ಶರಣಪ್ಪ ಪಟ್ಟೇದ, ಶರಣಪ್ಪ ಹರಿಜನ, ಬಸವರಾಜ ಮುಂಡರಗಿ, ಗಂಗಪ್ಪ ಜೂಲಕಟ್ಟಿ, ಸಿಎಚ್‌ಒ ಯಮನೂರಪ್ಪ, ಸಿಬ್ಬಂದಿ ಸಂಗಮೇಶ ಶಾಸ್ತ್ರಿ, ಮಂಜುಳಾ, ರತ್ನಾ, ಕರವಸೂಲಿಗಾರ ಗಿರಿಯಪ್ಪ, ಹಾಗೂ ಆಶಾ ಕಾರ್ಯಕರ್ತೆಯರಿದ್ದರು.
Post a Comment