ಪ್ರಜ್ಞಾವಂತರು ಜಾಗೃತಿ ಮೂಡಿಸುವಂತಾಗಲಿ

ಪ್ರಗತಿ ವಾಣಿ, ಕೊಪ್ಪಳ
ಯಲಬುರ್ಗಾ: ತಾಲೂಕಿನ ತಾಳಕೇರಿ ಸರ್ಕಾರಿ ಪ್ರೌಢ ಶಾಲೆಯ ರಾಮನ್ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಚಂದ್ರಗಹಣ ಕುರಿತ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರಾಮನ್ ವಿಜ್ಞಾನ ಕೇಂದ್ರದ ಸಂಚಾಲಕ ದೇವೇಂದ್ರ ಜಿರ್ಲಿ ಮಾತನಾಡಿ, ಗ್ರಹಣಗಳು ಪ್ರಾಕೃತಿಕ ವಿದ್ಯಮಾನಗಳಷ್ಟೇ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲೇ ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಷಯದಲ್ಲಿ ಓದಿದ್ದೇವೆ. ಗ್ರಹಣಗಳು ಅಂದರೆ ಬೆಳಕು ಮತ್ತು ನೆರಳಿನಾಟ ಅಂತ ಪ್ರಾಥಮಿಕ ಶಾಲೆಯ ಪ್ರತಿ ಮಗುವಿಗೂ ಗೊತ್ತಿರುವ ವಿಷಯ. ಆದರೆ ಸಮಾಜದಲ್ಲಿ ಗ್ರಹಣಗಳ ಬಗ್ಗೆ ಇಲ್ಲಸಲ್ಲದ ಕಟ್ಟುಕತೆ, ಮೌಢ್ಯ ಬಿತ್ತಲಾಗಿದೆ‌. ಈ ವೇಳೆ ಶೇ. ೮೦ ಜನ ಸಹಜ ಜೀವನ ನಡೆಸುತ್ತಿದ್ದರೆ, ಇನ್ನೂ ಶೇ೨೦ ರಷ್ಟು ಜನ ಈ ಸಂಬಂಧ ಆತಂಕಿತರಾಗಿ ಏನೇನೋ ಇಲ್ಲಸಲ್ಲದ ಆಚರಣೆಗೆ ಮುಂದಾಗುತ್ತಾರೆ. ಸೂರ್ಯ ಚಂದ್ರದರಿಗೆ ಹಿಡಿದ ಗ್ರಹಣ ತಂತಾನೆ ಬಿಡುತ್ತದೆ. ಆದರೆ ಇಂತವರ ಮಿದುಳಿಗೆ ಹಿಡಿದ ಗ್ರಹಣ ಬಿಡಿಸುವುದು ಕಷ್ಟ. ಈ ಕೆಲಸ ಪ್ರಜ್ಞಾವಂತರು ಹಾಗೂ ವಿದ್ಯಾವಂತರೂ ಅನಿಸಿಕೊಂಡಿರುವ ಶಿಕ್ಷಕರು, ವೈದ್ಯರು, ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಸೇರಿದಂತೆ ವೈಜ್ಞಾನಿಕ ಸಂಘ ಸಂಸ್ಥೆಗಳು ಮಾಡಬೇಕಿದೆ. ಇಸ್ರೋ ಹಾಗೂ ನಾಸಾ ಸಂಸ್ಥೆಗಳು ತಿಳಿಸುವ ಸತ್ಯಸಂಗತಿ ಮತ್ತು ವಿಚಾರಗಳನ್ನು ಜನತೆಯ ಮುಂದೆ ಇಡಬೇಕಾಗಿದೆ ಎಂದರು.
ಸಮಾಜ ವಿಜ್ಞಾನ ಶಿಕ್ಷಕಿ ಶೋಭಾ ಬಾಗೇವಾಡಿ ಮಾತನಾಡಿ, ಚಂದ್ರಗ್ರಹಣ ಎಂಬುದು ಸೃಷ್ಟಿಯ ಸಹಜ ವಿದ್ಯಮಾನ. ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ ಇದು ಘಟಿಸುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದೇ ಚಂದ್ರಗ್ರಹಣ. ಇದು ಸೂರ್ಯ ಚಂದ್ರ ಮತ್ತು ಭೂಮಿ ನೇರ ರೇಖೆಯಲ್ಲಿ ಬಂದಾಗ ನಡೆಯುವ ಸುಂದರ ದೃಶ್ಯ. ಆಕಾಶ ಕಾಯಗಳ ಚಲನೆಗಳು ಸಹಜ ಎಂದು ವಿವರಿಸಿದರು.
ಗ್ರಹಣದ ವೇಳೆ ಶಿಕ್ಷಕರು, ವಿದ್ಯಾರ್ಥಿಗಳು ಬಾಳೆಹಣ್ಣು ಮತ್ತು ಸಕ್ಕರೆ ಆರತಿ ತಿನಿಸು ತಿನ್ನುವುದರ ಮ‌ೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭ ಶಿಕ್ಷಕರಾದ ತಿಮ್ಮಣ್ಣ ಜಗ್ಗಲ್, ವೆಂಕಟಲಕ್ಷ್ಮಿ, ಸುನಿಲಕುಮಾರ್ ಸೇರಿದಂತೆ ಇತರರಿದ್ದರು.
-----

0/Post a Comment/Comments