ಕ್ರೀಡಾಂಗಣಕ್ಕೆ ಪಟೇಲ್ ನಾಮಕರಣ ಸ್ವಾಗತಾರ್ಹ, ಆದರೆ ಕಾನೂನು ಪಾಲನೆ ಇಲ್ಲ
ಪ್ರಗತಿ ವಾಣಿ, ಕೊಪ್ಪಳ
ಯಲಬುರ್ಗಾ:ಪಟ್ಟಣದ ತಾಲೂಕು ಕ್ರೀಡಾಂಗಣಕ್ಕೆ ದೇಶದ ಮೊದಲ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಹೆಸರು ನಾಮಕರಣ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಸಚಿವ ಹಾಲಪ್ಪ ಆಚಾರ್ ಅವರು ಕಾನೂನು ಗಾಳಿಗೆ ತೂರಿ ತರಾತುರಿಯಲ್ಲಿ ನಾಮಕರಣ ಮಾಡಿರುವುದು ಸಮಂಜಸವಲ್ಲ ಎಂದು ಕಾಂಗ್ರೆಸ್ ಮುಖಂಡ ಮಾನಪ್ಪ ಪೂಜಾರ್ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಯಾವುದೇ ಒಬ್ಬ ವ್ಯಕ್ತಿಯ ಹೆಸರನ್ನು ವೃತ್ತ, ಕಟ್ಟಡಗಳಿಗೆ ನಾಮಕರಣ ಮಾಡುವ ಮುಂಚೆ ಕಾನೂನಾತ್ಮಕವಾಗಿ ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಜಿಲ್ಲಾಧಿಕಾರಿಗಳ ಆದೇಶ ಪಡೆದುಕೊಂಡು ಘೋಷಣೆ ಅಥವಾ ನಾಮಕರಣ ಮಾಡುವುದು ಸಹಜ ಪ್ರಕ್ರಿಯೆ. ಪಪಂನಲ್ಲಿ ಠರಾವು ಮಾಡಿದ ಕಾರಣದಿಂದ ಕಾನೂನು ಬಾಹಿರವಾಗಿ ಸೆ.೧೭ ರಂದು ಪಟ್ಟಣದ ಕ್ರೀಡಾಂಗಣಕ್ಕೆ ವಲ್ಲಭಭಾಯಿ ಪಟೇಲ್ ಹೆಸರು ನಾಮಕರಣ ಮಾಡಿವುದು ಎಷ್ಟು ಸರಿ. ಬಿಜೆಪಿಯವರು ಕಾನೂನು ಪರಿಪಾಲನೆ ಮಾಡದೇ ಈ ರೀತಿ ಉದ್ಘಾಟನೆ ಅನಾವರಣ ಮಾಡುತ್ತಿರುವುದು ಶೋಭೆ ತರುವಂತದ್ದಲ್ಲ. ಸಚಿವರು ಕಾನೂನನ್ನು ತಿಳಿದುಕೊಂಡು ಅದರ ಅಡಿಯಲ್ಲಿ ಕಾರ್ಯಕ್ರಮ ಕೈಗೊಳ್ಳಬೇಕು. ಈ ಹಿಂದೆ ರಾಯರಡ್ಡಿ ಶಾಸಕರಾಗಿದ್ದ ಸಂದರ್ಭದಲ್ಲಿ ಪಟ್ಟಣಕ್ಕೆ ತಾಲೂಕು ಕ್ರೀಡಾಂಗಣ ನಿರ್ಮಾಣವಾಗಿದ್ದು, ಆದರೆ ಹಾಲಪ್ಪ ಆಚಾರ್ ಅವರು ಶಾಸಕರಾಗಿ, ಸಚಿವರಾದರೂ ಕೂಡ ಕ್ರೀಡಾಂಗಣ ಕ್ಕೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಯಾವುದೇ ಅನುದಾನ ನೀಡದೇ ತರಾತುರಿಯಲ್ಲಿ ನಾಮಕರಣ ಮಾಡುವುದು ಸರಿಯಲ್ಲ. ಇನ್ನೂ ಮುಂದಾದರೂ ಕ್ರೀಡಾಂಗಣ ಅಭಿವೃದ್ಧಿ ಗಾಗಿ ವಿಶೇಷ ಅನುದಾನ ನೀಡಬೇಕು ಎಂದರು.
ಪಪಂ ಸದಸ್ಯರಾದ ಹನುಮಂತ ಭಜಂತ್ರಿ, ಡಾ.ನಂದಿತಾ ದಾನರೆಡ್ಡಿ ಮಾತನಾಡಿ, ಸರ್ಕಾರದ ಆದೇಶ ವಿಲ್ಲದೇ ಹೆಸರು ಇಟ್ಟಿರುವುದು ಅವರ ಬೇಜವಾಬ್ದಾರಿ ತನಕ್ಕೆ ಸಾಕ್ಷಿಯಾಗಿದೆ. ನಾಮಕರಣ ಬಗ್ಗೆ ಕಾಂಗ್ರೆಸ್ ಪಪಂ ಸದಸ್ಯರ ಗಮನಕ್ಕೆ ತರದೇ ನಿರ್ಧಾರ ಕೈಗೊಂಡಿರುವುದು ಶೋಚನೀಯ. ಸರ್ಕಾರದ ಸಭೆ, ಸಮಾರಂಭದಲ್ಲಿ ನಮಗೆ ಮಾತನಾಡಲು ಅವಕಾಶ ನೀಡದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕ್ರೀಡಾಂಗಣ ಅಭಿವೃದ್ಧಿಗೆ ಅನುದಾನ ಕೊಡದೇ ನಾಮಕರಣ ಮಾಡಿರುವುದು ಬಿಜೆಪಿಯವರ ಕಾಯಕವಾಗಿದೆ ಎಂದರು.
ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಹಾಂತೇಶ ಗಾಣಿಗೇರ, ವಕ್ತಾರ ಹಂಪಯ್ಯಸ್ವಾಮಿ ಹಿರೇಮಠ ಮಾತನಾಡಿದರು.
ಇದೇ ವೇಳೆ ಪಪಂ ಸದಸ್ಯ ರಿಯಾಜ್ ಅಹಮ್ಮದ್ ಖಾಜಿ, ಮುಖಂಡರಾದ ಸಂಗಮೇಶ ಗುತ್ತಿ, ಗಿರಿಜಾ ರೇವಣಪ್ಪ ಸಂಗಟಿ, ಸಾವಿತ್ರಿ ಗೊಲ್ಲರ್, ಆನಂದ ಉಳ್ಳಾಗಡ್ಡಿ, ಹೊನ್ನಪ್ಪ ಕೊಪ್ಪಳ, ಶರಣಮ್ಮ ಪೂಜಾರ, ಶಿವನಗೌಡ ದಾನರೆಡ್ಡಿ, ಸುಧೀರ ಕೊರ್ಲಳ್ಳಿ ಇದ್ದರು.
-----
Post a Comment