ಕೃಷಿ ಕಾಪಾಡಿಕೊಳ್ಳುವ ಕಾಲ ಬಂದಿದೆ


ಪ್ರಗತಿ ವಾಣಿ, ಯಲಬುರ್ಗಾ
ಆಧುನಿಕ ತಂತ್ರಜ್ಞಾನದ ಭರಾಟೆ ನಡುವೆ ನಮ್ಮ ದೇಶದ ಯುವ ಜನತೆ ಕೃಷಿ ಕಾಪಾಡಿಕೊಳ್ಳುವ ಕಾಲ ಬಂದಿದೆ ಎಂದು ಜಿಲ್ಲಾ ಕೃಷಿ ಉಪ ನಿರ್ದೇಶಕ ಸಹದೇವ ಯರಗೊಪ್ಪ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೃಷಿ ಇಲಾಖೆ ಹಾಗೂ ಬೇವೂರಿನ ಸಂಗನಬಸವ ರೈತ ಉತ್ಪಾದಕ ಕಂಪನಿಯಿಂದ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ನನ್ನ ಬೆಳೆ ನನ್ನ ಹಕ್ಕು ಬೆಳೆ ಸಮೀಕ್ಷೆ ಉತ್ಸವ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ತಂತ್ರಜ್ಞಾನ ಯುಗ ಆರಂಭವಾಗಿದ್ದರೂ ಕೃಷಿಕರು ಡಿಜಿಟಲ್ ಮಾದರಿಯ ಬೆಳೆ ಸಮೀಕ್ಷೆ ಮಾಡುವಲ್ಲಿ ತುಂಬಾ ಹಿಂದುಳಿದಿದ್ದಾರೆ. ಹೀಗಾಗಿ ಕಾಲೇಜು ಶಿಕ್ಷಣ ಪಡೆಯುತ್ತಿರುವ ರೈತರ ಮಕ್ಕಳು ಕೃಷಿ ಕಾಯಕದಲ್ಲಿ ಕೈಜೋಡಿಸಿ, ಬೆಳೆ ಸಮೀಕ್ಷೆ ಮಾಹಿತಿ ನೀಡುವಲ್ಲಿ ಸಹಕರಿಸಿದರೆ ಉಪಯುಕ್ತವಾಗುತ್ತದೆ ಎಂದರು.
ವಾಸ್ತವ ಕಾಲಘಟ್ಟದಲ್ಲಿ ಕೃಷಿ ಭೂಮಿ ರಾಸಾಯನಿಕ ಬೆರೆತು ಸಾಕಷ್ಟು ಪ್ರಮಾಣದಲ್ಲಿ ಫಲವತ್ತತೆ ಕಳೆದುಕೊಂಡಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆಯಿಂದ ದೇಶ ತತ್ತರಿಸುವ ಕಾಲ ಬರುತ್ತದೆ. ಕಾರಣ ಯುವ ಜನಾಂಗ ಕೃಷಿಭೂಮಿ ಕಾಪಾಡಲು ಮುಂದಾಗಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ, ಸಹರಾ ಸಂಸ್ಥೆಯ ಜಿಲ್ಲಾ ಸಂಯೋಜಕ ಅಲ್ಲಾಗಿರಿರಾಜ್ ಕನಕಗಿರಿ ಮಾತನಾಡಿದರು.
ಈ ಸಂದರ್ಭ ಪ್ರಾಚಾರ್ಯ ಕಿರಣ್‌ಕುಮಾರ್ ಕಬ್ಬಿಣದ, ಸಂಗನಬಸವ ರೈತ ಉತ್ಪಾದಕರ ಕಂಪನಿ ಸಿಇಒ ಡಿ.ಕೆ.ಗೊಂದಿ, ಅಧ್ಯಕ್ಷ ಹನುಮಂತಪ್ಪ ಮೇಟಿ, ಉಪಾಧ್ಯಕ್ಷೆ ಸುಮಿತ್ರಾ ಬಡಿಗೇರ್, ಎನ್.ಎಸ್‌.ತಾವರಗೇರಾ, ಆರ್‌ಎಸ್‌ಕೆ ತಾಂತ್ರಿಕ ವ್ಯವಸ್ಥಾಪಕ ದ್ಯಾಮನಗೌಡ ಕರಿಗೌಡ್ರ ಸೇರಿದಂತೆ ಇನ್ನಿತರರಿದ್ದರು.
-----

0/Post a Comment/Comments