೨೦೦ ಗುಂಡಿಗಳ ನಿರ್ಮಾಣಕ್ಕೆ ಮುಂದಾದ ಅರಣ್ಯ ಇಲಾಖೆ

ನರೇಗಾದಡಿ 70 ಎಕರೆ ಪ್ರದೇಶದಲ್ಲಿ ಮಳೆನೀರು ಸಂಗ್ರಹಣೆಯ 200 ಗುಂಡಿ ನಿರ್ಮಾಣ

ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಇದರಿಂದ ಬಿಸಿಲ ನಾಡು ಎಂದು ಕರೆವ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳ ಮಾಡಲು ಸಾಮಾಜಿಕ ಅರಣ್ಯ ಇಲಾಖೆಯು ಅರಣ್ಯ ಪ್ರದೇಶಗಳಲ್ಲಿ ಮಳೆನೀರು ಹರಿವ ಜಾಡಿನಲ್ಲಿ ಸಾವಿರಾರು ಲೀಟರ್‌ ನೀರಿನ ಸಾಮರ್ಥ್ಯ ಹೊಂದಿರುವ ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಳಕ್ಕೆ ನಾಂದಿ ಹಾಡಿದೆ.
ಹೌದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಬಂಡಿಯ 70 ಎಕರೆ ಫಾರೆಸ್ಟ್ ಜಾಗದಲ್ಲಿ ಮಳೆ ನೀರು ತಡೆಯುವ 200 ಗುಂಡಿಗಳನ್ನು ತೆಗೆಯಲಾಗಿದೆ. ಇದರಿಂದಾಗಿ ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ಮಳೆನೀರು ಈ ಗುಂಡಿಗಳಲ್ಲಿ ತುಂಬಿದ ಬಳಿಕ ಮುಂದೆ ಹರಿದು ಹೋಗುತ್ತದೆ. ಈ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಪ್ರತಿಬಾರಿ ಬೀಳುವ ಮಳೆನೀರು ನೇರವಾಗಿ ಭೂಮಿಯಲ್ಲಿ ಇಂಗುತ್ತದೆ. ಇದರಿಂದ ಅಲ್ಲಿನ ಗಿಡಮರಗಳಿಗೆ, ಪ್ರಾಣಿ ಪಕ್ಷಿಗಳಿಗೆ, ಜನರಿಗೆ ಕುಡಿಯಲು ನೀರು ಲಭ್ಯವಾಗುತ್ತದೆ.
ನರೇಗಾ ಯೋಜನೆಯಡಿ ಇಲ್ಲಿ 18 ಜನ ಕೂಲಿಕಾರರು ಗುಂಡಿಗಳನ್ನು ತೆಗೆಯುತ್ತಿದ್ದು, ಒಟ್ಟು 1000 ಕ್ಯೂಬಿಕ್ ಮೀಟರ್ ಇದ್ದು, 200 ಗುಂಡಿಗಳು 5 ಅಡಿ ಉದ್ದ, 1 ಅಡಿ ಅಗಲ, 1 ಅಡಿ ಆಳ ಹೊಂದಿವೆ. ಈ ಬಾರಿ ಬೀಳುವ ಮಳೆನೀರನ್ನು ತಡೆದು ಗಿಡಗಳಿಗೆ, ಪ್ರಾಣಿ-ಪಕ್ಷಿಗಳಿಗೆ ನೀರು ಲಭ್ಯವಾಗಲಿದೆ.

ಅರಣ್ಯ ಇಲಾಖೆಯು ಈಗಾಗಲೇ ನಿರ್ಮಿಸಲಾದ ಗುಂಡಿಗಳ ಪಕ್ಕದಲ್ಲಿ ಸಸಿಗಳನ್ನು ನಾಟಿ ಮಾಡುತ್ತಾರೆ. ಇದರಿಂದಾಗಿ ಅರಣ್ಣೀಕರಣ ಹೆಚ್ಚಾಗಲಿದೆ. ಅರಣ್ಯ ಹೆಚ್ಚಾದರೆ ಕಾಲ ಕಾಲಕ್ಕೆ ಮಳೆಯಾಗುತ್ತದೆ. ಮಳೆಯಾದರೆ ಭೂಮಿ ಸಮೃದ್ಧವಾಗುತ್ತದೆ. ಭೂಮಿ ಸಮೃದ್ಧವಾಗಿದ್ದರೆ ಮನುಷ್ಯ, ಪ್ರಾಣಿ-ಪಕ್ಷಿ, ಜೀವ ಜಲಗಳು ಬದುಕಲು ಸಾಧ್ಯ ಎನ್ನುತ್ತಾರೆ ಯಲಬುರ್ಗಾ ಸಾಮಾಜಿಕ ಅರಣ್ಯ ವಲಯ, ವಲಯ ಅರಣ್ಯ ಅಧಿಕಾರಿಗಳಾದ ಎ.ಎಸ್‌.ಪಾಕಿ ಅವರು.

ಪ್ರತಿವರ್ಷವೂ ಅರಣ್ಯ ಪ್ರದೇಶಗಳಲ್ಲಿ ಈ ರೀತಿಯ ಗುಂಡಿಗಳನ್ನು ನರೇಗಾ ಯೋಜನೆಯಡಿ ತೆಗೆಸಿ ಮಳೆನೀರನ್ನು ತಡೆಯುವಂತೆ ಮಾಡಲಾಗುತ್ತಿದೆ. ಬಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ 70 ಎಕರೆ ಪ್ರದೇಶದಲ್ಲಿ200 ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ಸಾಮಾಜಿಕ ಅರಣ್ಯ ವಲಯ ರಕ್ಷಕರಾದ ಶರಣಪ್ಪ ಕದಂಪುರ.

0/Post a Comment/Comments