ಸಾಮೂಹಿಕ ವಿವಾಹಗಳು ಬಡವರಿಗೆ ಸಹಕಾರಿ:ಸಚಿವ ಹಾಲಪ್ಪ ಆಚಾರ್

ಸಾಮೂಹಿಕ ವಿವಾಹಗಳು ಬಡವರಿಗೆ ನೆರವು
ಪ್ರಗತಿವಾಣಿ ಸುದ್ದಿ, ಯಲಬುರ್ಗಾ
ಗ್ರಾಮೀಣ ಪ್ರದೇಶಗಳ ಜಾತ್ರೆ, ಧಾರ್ಮಿಕ ಸಮಾರಂಭಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಬಡವರಿಗೆ ಸಹಕಾರಿಯಾಗಿವೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಹುಣಸಿಹಾಳ ಗ್ರಾಮದ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹಗಳು ಹಾಗೂ ನೂತನ ರಥೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನವ ಜೋಡಿಗಳು ಆದರ್ಶ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಹುಣಸಿಹಾಳ ಧಾರ್ಮಿಕತೆಗೆ ಹೆಸರಾದ ಗ್ರಾಮವಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು ಎಂದರು.
ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ನವ ದಂಪತಿಗಳು ಸಂಸಾರದಲ್ಲಿ ಸುಖ ದುಃಖವನ್ನು ಸಮನಾಗಿ ಸ್ವೀಕರಿಸಿ ಬದುಕು ಸಾಗಿಸಬೇಕು. ಗುರು ಹಿರಿಯರನ್ನು ಪೂಜ್ಯನೀಯ ಭಾವದಿಂದ ಕಾಣಬೇಕು. ಹುಣಸಿಹಾಳ ಶರಣಬಸವೇಶ್ವರ ಜಾತ್ರೆ ಸರ್ವಧರ್ಮದ ಸಂಕೇತಕ್ಕೆ ಸಾಕ್ಷಿಯಾಗಿದೆ. ಈ ಬಾರಿ ಹೊಸದಾಗಿ ೨೧ ಲಕ್ಷ ರೂ. ವೆಚ್ಚದ ನೂತನ ರಥೋತ್ಸವ ಜರುಗುತ್ತಿರುವುದು ಹೆಮ್ಮೆಯ  ವಿಷಯ ಎಂದರು.
ಕುದರಿಮೋತಿಯ ಮೈಸೂರು ಮಠದ ಶ್ರೀ ವಿಜಯ ಮಹಾಂತ ಸ್ವಾಮೀಜಿ, ಹುಣಸಿಹಾಳದ ಬಸವಧರ್ಮ ಮಠದ ಶ್ರೀ ಶಿವಶಾಂತವೀರ ಸ್ವಾಮೀಜಿ, ಸುಳೇಕಲ್‌ನ ಶ್ರೀಭುವನೇಶ್ವರ ತಾತನವರು, ಶ್ರೀರುದ್ರಯ್ಯಸ್ವಾಮಿ ಹಿರೇಮಠ, ಶ್ರೀವೀರಭದ್ರಯ್ಯಸ್ವಾಮಿ ಹಿರೇಮಠ, ಶ್ರೀ ಗವಿಸಿದ್ದಯ್ಯಸ್ವಾಮಿ ಹಿರೇಮಠ ಸಾನಿಧ್ಯ ವಹಿಸಿದ್ದರು. ಮುಖಂಡ ಅಯ್ಯನಗೌಡ ಕೆಂಚಮ್ಮನವರ್ ಮಾತನಾಡಿದರು. ಇದೇ ವೇಳೆ ಸಾಮೂಹಿಕ ವಿವಾಹಗಳು  ಜರುಗಿದವು.
ಈ ಸಂದರ್ಭ ಗ್ರಾಪಂ ಅಧ್ಯಕ್ಷ ಸಂಗನಗೌಡ  ಕೆಂಚಮ್ಮನವರ್, ತಹಸೀಲ್ದಾರ್ ಶ್ರೀಶೈಲ ತಳವಾರ್, ಪಿಡಿಒ ಪ್ರಕಾಶ, ಪಿಎಸ್‌ಐ ಶೀಲಾ ಮೂಗನಗೌಡ್ರ, ಪ್ರಮುಖರಾದ ರಾಚಪ್ಪ ಹುರಳಿ, ರುದ್ರಪ್ಪ ಹುಚನೂರು, ಮಲ್ಲಿಕಾರ್ಜುನಗೌಡ ನೆಲಜೇರಿ, ಚನ್ನಬಸನಗೌಡ ಕೆಂಚಮ್ಮನವರ್, ದ್ಯಾಮನಗೌಡ ಕರಿಗೌಡ್ರ, ವೀರಣ್ಣ ಹುಬ್ಬಳ್ಳಿ, ಶರಣಪ್ಪ ಈಳಿಗೇರ್, ಕಳಕಪ್ಪ ಕಂಬಳಿ ಸೇರದಿಂತೆ ಇನ್ನಿತರರಿದ್ದರು.

0/Post a Comment/Comments