ಪ್ರಗತಿವಾಣಿ ವಿಶೇಷ ಯಲಬುರ್ಗಾ
ಬೇಸಿಗೆಯ ರಣ ಬಿಸಿಲು ಶುರುವಾಗಿದೆ. ನೀರಿಗಾಗಿ ಅಲೆದಾಡುವ ಮೂಕ ಪಕ್ಷಿಗಳು ರೋಧನೆ ಹೇಳತೀರದು. ಈ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದ ಉದ್ಯಾನವನದಲ್ಲಿ ಆರೋಗ್ಯ ಸಿಬ್ಬಂದಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿ, ಪಕ್ಷಿಗಳ ದಾಹ ನೀಗಿಸಲು ಮುಂದಾಗಿದೆ.
ಮಣ್ಣಿನ ಪಾತ್ರೆಗಳಲ್ಲಿ ನೀರು: ಆಸ್ಪತ್ರೆ ಉದ್ಯಾನವನದಲ್ಲಿ ನಾನಾ ತಳಿಯ ವನಸ್ಪತಿ ಸಸಿಗಳನ್ನು ಬೆಳೆಸಲಾಗಿದೆ. ಇಲ್ಲಿನ ಸುಂದರ ಪರಿಸರದಲ್ಲಿ ನಿತ್ಯ ಹಕ್ಕಿಗಳ ಕಲರವ ಇರುತ್ತದೆ. ಬೇಸಿಗೆಯ ತಾಪಮಾನ ಹೆಚ್ಚಳದಿಂದ ನೀರಿಗಾಗಿ ಪರದಾಡುವ ಪಕ್ಷಿಗಳ ದಾಹ ತಣಿಸಲು ಆರೋಗ್ಯ ಸಿಬ್ಬಂದಿ ನೀರಿನ ವ್ಯವಸ್ಥೆ ಮಾಡಿದೆ. ಉದ್ಯಾನದಲ್ಲಿರುವ ಗಿಡಗಳಿಗೆ ಮಣ್ಣಿನ ಪಾತ್ರೆಗಳನ್ನು ದಾರದಿಂದ ಕಟ್ಟುವ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಇಲ್ಲಿ ಬರುವ ಪಕ್ಷಿಗಳು ನೆರಳಿನ ಆಶ್ರಯ ಪಡೆಯುವುದರ ಜತೆಗೆ ಮಣ್ಣಿನ ಪಾತ್ರೆ ಮೇಲೆ ಕುಳಿತು ನೀರು ಕುಡಿಯುತ್ತವೆ.
ತಂಪು ಪಾನೀಯ ಮೊರೆ: ಬಿಲಿಸಿಲಿನ ತಾಪಮಾನಕ್ಕೆ ಬಸವಳಿದ ತಾಲೂಕಿನ ಜನತೆ ತಂಪು ಪಾನೀಯ ಮೊರೆ ಹೋಗುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಕಲ್ಲಂಗಡಿ, ಎಳನೀರು, ವಿವಿಧ ಹಣ್ಣುಗಳ ಜ್ಯೂಸ್, ಐಸ್ ಕ್ರೀಂನಂತಹ ಪಾನೀಯ ಕುಡಿಯುವುದು ಹೆಚ್ಚು.
--
ಪಕ್ಷಿಗಳು ಸಾಮಾನ್ಯವಾಗಿ ರಣ ಬಿಸಿಲಿನಲ್ಲಿ ನೆರಳು ಮತ್ತು ನೀರಿನಾಶ್ರಯ ಪಡೆಯಲು ಪರದಾಡುತ್ತವೆ. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಕಳೆದ ಬಾರಿ ಅರಣ್ಯ ಇಲಾಖೆಯವರು ನೀಡಿದ ಮಣ್ಣಿನ ಪಾತ್ರೆಗಳನ್ನು ವನಸ್ಪತಿ ಉದ್ಯಾನದ ಗಿಡದಲ್ಲಿ ಕಟ್ಟಲಾಗಿದ್ದು, ಪಾತ್ರೆಗಳಿಗೆ ನಿತ್ಯ ಆಸ್ಪತ್ರೆ ಸಿಬ್ಬಂದಿ ನೀರು ಹಾಕುತ್ತಾರೆ. ಅದರಂತೆ ಪ್ರತಿಯೊಬ್ಬರೂ ಪಕ್ಷಿ ಸಂಕುಲ ಉಳಿವಿಗೆ ಮತ್ತು ನೀರಿನ ದಾಹ ತಣಿಸಲು ನೀರಿನ ವ್ಯವಸ್ಥೆ ಕಲ್ಪಿಸಿದರೆ ಒಳಿತಾಗುವುದು.
-ಡಾ.ವಿ.ಪ್ರಕಾಶ, ಮುಖ್ಯವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ.
--
ಹವಾಮಾನ ವೈಪರೀತ್ಯದಿಂದ ಕಣ್ಮರೆಯಾಗುತ್ತಿರುವ ಪಕ್ಷಿಸಂಕುಲ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಆಸ್ಪತ್ರೆ ಆವರಣದ ವನಸ್ಪತಿ ಉದ್ಯಾನದಲ್ಲಿ ಮಣ್ಣಿನ ಪಾತ್ರೆಗಳನ್ನು ಗಿಡಗಳಿಗೆ ನೇತಾಕಲಾಗಿದ್ದು, ಪಕ್ಷಿಗಳ ನೀರಿನ ದಾಹ ತಣಿಸಲಾಗುತ್ತಿದೆ. ಪಾತ್ರೆಗಳಲ್ಲಿ ದಿನಾಲೂ ನೀರು ತುಂಬಿಸಲಾಗುತ್ತಿದೆ.
-ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ.
Post a Comment